ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನ: 1 ತಿಂಗಳ ಬಳಿಕ ಆರೋಪಿ ಬಂಧನ

ಬೆಂಗಳೂರು: ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು ಘಟನೆ ನಡೆದ ಒಂದು ತಿಂಗಳ ಬಳಿಕ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
ವಿಲಿಯಂ ಪ್ರಕಾಶ್ ಬಂಧಿತ ಆರೋಪಿ. ಈ ಸೆಪ್ಟೆಂಬರ್ 16 ರಂದು ಚರ್ಚ್ನ ಬಾಗಿಲು ಮುಚ್ಚಲು ಹೋಗಿದ್ದ ಗೃಹಿಣಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.
ಸಂತ್ರಸ್ತ ಮಹಿಳೆಯ ಪತಿ ಚರ್ಚ್ನಲ್ಲಿ ಕೆಲಸ ಮಾಡ್ತಿದ್ದು, ಪತಿಯ ಸೂಚನೆ ಮೇರೆಗೆ ಮಹಿಳೆ ಚರ್ಚ್ ಬಾಗಿಲು ಮುಚ್ಚಲು ಹೋಗಿದ್ದರು. ಆ ವೇಳೆ ಆಕೆಯನ್ನು ಹಿಂಬಾಲಿಸಿದ್ದ ಆರೋಪಿ ವಿಲಿಯಂ ಪ್ರಕಾಶ್, ಚಾಕುವಿಂದ ಬೆದರಿಸಿ ಅತ್ಯಾಚಾರಕ್ಕೆ ಮುಂದಾಗಿದ್ದ. ಈ ವೇಳೆ ಸಹಾಯಕ್ಕಾಗಿ ಕೂಗಾಡಿದ್ದ ಮಹಿಳೆ, ಆರೋಪಿಯನ್ನು ತಳ್ಳಿ ತಪ್ಪಿಸಿಕೊಂಡಿದ್ದರು.
ಕೂಗಾಡಿದ್ದರಿಂದ ಜನ ಬಂದುಬಿಡುತ್ತಾರೆ ಎಂಬ ಭಯದಿಂದ ವಿಲಿಯಂ ಪ್ರಕಾಶ್ ಸಹ ಸ್ಥಳದಿಂದ ಕಾಲ್ಕಿತ್ತಿದ್ದ. ಗಣೇಶ ಮೆರವಣಿಗೆ ಬರುವಾಗ ಮೆರವಣಿಗೆಯಲ್ಲಿ ಸೇರಿಕೊಂಡು ತಲೆಮರೆಸಿಕೊಂಡಿದ್ದ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಅಶೋಕನಗರ ಪೊಲೀಸರು, ಘಟನೆ ನಡೆದ ತಿಂಗಳ ಬಳಿಕ ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ. (ದಿಗ್ವಿಜಯ ನ್ಯೂಸ್)