ʻ2024ರಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬರದಿದ್ದರೆ, ಅದೇ ನನ್ನ ಕೊನೆ ಚುನಾವಣೆʼ: ಚಂದ್ರಬಾಬು ನಾಯ್ಡು

ʻ2024ರಲ್ಲಿ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬರದಿದ್ದರೆ, ಅದೇ ನನ್ನ ಕೊನೆ ಚುನಾವಣೆʼ: ಚಂದ್ರಬಾಬು ನಾಯ್ಡು

ಆಂಧ್ರ ಪ್ರದೇಶ: 2024ರಲ್ಲಿ ಜನರು ತೆಲುಗು ದೇಶಂ ಪಕ್ಷ(ಟಿಡಿಪಿ)ವನ್ನು ಅಧಿಕಾರಕ್ಕೆ ತರದಿದ್ದರೆ, ಅದೇ ನನ್ನ ಕೊನೆಯ ಚುನಾವಣೆ ಎಂದು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಹೇಳಿದ್ದಾರೆ.

ಬುಧವಾರ ತಡರಾತ್ರಿ ಕರ್ನೂಲ್ ಜಿಲ್ಲೆಯಲ್ಲಿ ನಡೆದ ರೋಡ್‌ಶೋನಲ್ಲಿ ಭಾವುಕರಾಗಿ ಮಾತನಾಡಿದ ಚಂದ್ರಬಾಬು ನಾಯ್ಡು, ಟಿಡಿಪಿ ಅಧಿಕಾರಕ್ಕೆ ಬರುವವರೆಗೂ ವಿಧಾನಸಭೆಗೆ ಕಾಲಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

'ನಾನು ವಿಧಾನಸಭೆಗೆ ಮತ್ತೆ ಹೋಗಬೇಕೆಂದರೆ, ನಾನು ರಾಜಕೀಯದಲ್ಲಿ ಉಳಿಯಬೇಕಾದರೆ ಮತ್ತು ಆಂಧ್ರಪ್ರದೇಶಕ್ಕೆ ನ್ಯಾಯವನ್ನು ನೀಡಬೇಕಾದರೆ ಮುಂದಿನ ಚುನಾವಣೆಯಲ್ಲಿ ನಮ್ಮ ಗೆಲುವನ್ನು ನೀವು ಖಚಿತಪಡಿಸಬೇಕು. ಇಲ್ಲದಿದ್ರೆ, ಅದೇ ನನ್ನ ಕೊನೆಯ ಚುನಾವಣೆ ಆಗಲಿದೆ' ಎಂದಿದ್ದಾರೆ.

ಈ ವೇಳೆ, 'ನೀವು ನನ್ನನ್ನು ಆಶೀರ್ವದಿಸುತ್ತೀರಾ? ನೀವು ನನ್ನನ್ನು ನಂಬುತ್ತೀರಾ' ಎಂದು ಅವರು ಜನರನ್ನು ಕೇಳಿದರು. ಆಗ ಜನರು ಹರ್ಷೋದ್ಘಾರ ವ್ಯಕ್ತಪಡಿಸಿದರು.