ಟಿ20 ಕ್ರಿಕೆಟ್‌ನಲ್ಲಿ ಮತ್ತೊಮ್ಮೆ ರನ್‌ಗಳಿಸಲು ಎಡವಿದ ರಿಷಭ್ ಪಂತ್: ಇನ್ನೆಷ್ಟು ಅವಕಾಶ ಕೊಡಬೇಕು?
ಭಾರತ-ನ್ಯೂಜಿಲೆಂಡ್ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 161ರನ್ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಮತ್ತೊಮ್ಮೆ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿದೆ. ಓಪನರ್ ಆಗಿ ಕಣಕ್ಕಿಳಿದ ಇಶಾನ್ ಕಿಶನ್ ಹಾಗೂ ರಿಷಭ್ ಪಂತ್ ಜೋಡಿ ಭಾರತಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ಮತ್ತೆ ಎಡವಿದೆ.
ಮಳೆಯಿಂದಾಗಿ ಕೊಂಚ ತಡವಾಗಿ ಆರಂಭಗೊಂಡಿದ್ದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 160ರನ್‌ಗಳಿಗೆ ಆಲೌಟ್ ಆಯಿತು. 161ರನ್ ಗುರಿ ಬೆನ್ನತ್ತಿದ ಭಾರತದ ಪರ ಟಾಪ್ ಆರ್ಡರ್ ಬ್ಯಾಟಿಂಗ್ ಕೈ ಕೊಟ್ಟಿದೆ. ಓಪನರ್‌ಗಳಾದ ಇಶಾನ್ ಕಿಶನ್ 11, ರಿಷಭ್ ಪಂತ್ 11 ರನ್‌ಗಳಿಸಿ ಔಟಾದ್ರೆ, ಉತ್ತಮ ಫಾರ್ಮ್‌ನಲ್ಲಿದ್ದ ಸೂರ್ಯಕುಮಾರ್ ಯಾದವ್ 13 ರನ್ ಶ್ರೇಯಸ್ ಅಯ್ಯರ್ 0 ಗೆ ಔಟಾದ್ದಾರೆ.
ರಿಷಭ್ ಪಂತ್ ಓಪನರ್ ಆಗಿ 5 ಎಸೆತಗಳಲ್ಲಿ ಕೇವಲ 11 ರನ್‌ಗಳಿಗೆ ಔಟ್ ಆಗುವ ಮೂಲಕ ಮತ್ತೊಮ್ಮೆ ಮಿಂಚುವಲ್ಲಿ ವಿಫಲಗೊಂಡರು. 220 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ರಿಷಭ್ ಪಂತ್ ಪವರ್‌ಪ್ಲೇ ಓವರ್‌ಗಳಲ್ಲಿ ಕಡಿಮೆ ರನ್‌ಗೆ ಔಟಾಗುವ ಮೂಲಕ ವಿಕೆಟ್ ಒಪ್ಪಿಸಿದ್ರು. ಎರಡು ಬೌಂಡರಿ ಸಿಡಿಸಿ ಭರವಸೆ ಮೂಡಿಸಿದ್ದ ಪಂತ್ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಇಶ್ ಸೋಧಿಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು.
ಈ ಇನ್ನಿಂಗ್ಸ್ ಮೂಲಕ ಚುಟುಕು ಫಾರ್ಮೆಟ್‌ನಲ್ಲಿ ರಿಷಭ್ ತನ್ನ ಕಳಪೆ ಫಾರ್ಮ್ ಮುಂದುವರಿಸಿದ್ದು, ಓಪನರ್ ಆಗಿ ಬಡ್ತಿ ಪಡೆದ ಮತ್ತೊಂದು ಪಂದ್ಯದಲ್ಲಿ ವಿಫಲರಾಗಿದ್ದಾರೆ. ಮೌಂಟ್ ಮೌಂಗನ್ಯುಯಿಯಲ್ಲಿ ನಡೆದ ಕಳೆದ ಪಂದ್ಯದಲ್ಲಿ ರಿಷಭ್ ಪಂತ್ 13 ಎಸೆತಗಳಲ್ಲಿ ಕೇವಲ 6 ರನ್‌ಗಳಿಗೆ ಔಟ್ ಆಗುವ ನಿರಾಸೆ ಮೂಡಿಸಿದ್ರು.
ರಿಷಭ್ ಪಂತ್ ಹೀಗೆ ಚುಟುಕು ಫಾರ್ಮೆಟ್‌ನಲ್ಲಿ ಪದೇ ಪದೇ ವೈಫಲ್ಯಗೊಂಡಿದ್ದು, ಓಪನರ್ ಆಗಿಯೂ ಸಹ ಕ್ಲಿಕ್ ಆಗುತ್ತಿಲ್ಲ. ಹೀಗಾಗಿ ಇನ್ನೆಷ್ಟು ಅವಕಾಶ ನೀಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ. ಸಂಜು ಸ್ಯಾಮ್ಸನ್‌ರಂತಹ ಪ್ರತಿಭಾನ್ವಿತ ಆಟಗಾರ ಬೆಂಚ್‌ನಲ್ಲಿದ್ದರೂ ರಿಷಭ್‌ಗೆ ಏಕೆ ಇಷ್ಟು ಅವಕಾಶ ಎನ್ನುವುದು ಕ್ರಿಕೆಟ್ ಪಂಡಿತರ ವಾದವಾಗಿದೆ.
ಆಸ್ಟ್ರೇಲಿಯಾದಲ್ಲಿ ಕಳೆದ ಭಾನುವಾರಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದರು. ಆದ್ರೆ ರಿಷಭ್ ಮಿಂಚುವಲ್ಲಿ ವಿಫಲವಾಗಿದ್ದಲ್ಲದೆ ಭಾರತ 10 ವಿಕೆಟ್‌ಗಳಿಂದ ಸೋಲನ್ನ ಅನುಭವಿಸಿತು.