ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಅತೃಪ್ತರ ಮನವೊಲಿಕೆ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಅತೃಪ್ತರ ಮನವೊಲಿಕೆ: ಸತೀಶ್ ಜಾರಕಿಹೊಳಿ

ಸಿಂಧನೂರು: ಕಾಂಗ್ರೆಸ್ ಪಕ್ಷದ ಟಿಕೆಟ್ ಘೋಷಣೆಯಾದ ಬಳಿಕ ಉಂಟಾಗಬಹುದಾದ ಅಸಮಾಧಾನವನ್ನು ಜಿಲ್ಲಾ ಹಂತದ ನಾಯಕರೇ ಮಾತುಕತೆ ನಡೆಸಿ ಶಮನಗೊಳಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.

ಅವರು ನಗರದ ಪದವಿ ಮಹಾವಿದ್ಯಾಲಯದ ಹೆಲಿಪ್ಯಾಡ್‍ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಮೂರ್ನಾಲ್ಕು ಜನರು ಆಕಾಂಕ್ಷಿಗಳಿರುವ ಕಡೆಯಲ್ಲಿ ಭಿನ್ನಮತ ಉಂಟಾದರೆ, ಜಿಲ್ಲಾ ನಾಯಕರು ಸಕ್ರಿಯವಾಗಿ ಸರಿಪಡಿಸುತ್ತಾರೆ. ಶೇ.50ರಷ್ಟು ಟಿಕೆಟ್‍ಗಳನ್ನು ಬಹುಬೇಗವೇ ಪಕ್ಷದ ವರಿಷ್ಠರು ಘೋಷಣೆ ಮಾಡಲಿದ್ದಾರೆ ಎಂದರು.

ಬಿಜೆಪಿಯದು ಗೋಡ್ಸೆ ಅಜೆಂಡಾ
ಬಿಜೆಪಿಯವರಿಗೆ ಬೇರೆ ವಿಷಯವೇ ಗೊತ್ತಿಲ್ಲ. ಅವರಿಗೆ ಹಿಂದುತ್ವದ ನೆನೆಪಾಗುತ್ತದೆ. ನಮಗೆ ನಮ್ಮ ರಾಷ್ಟ್ರೀಯ ನಾಯಕರನ್ನು ಯಾವಾಗ ಕರೆಯಿಸಬೇಕು ಎನ್ನುವುದು ಗೊತ್ತಿದೆ. ಅವರಿಗೆ ಚುನಾವಣೆ ಬಂದಾಗ ಪ್ರಧಾನ ಮಂತ್ರಿಗಳನ್ನು ಕರೆಯಿಸಿಕೊಳ್ಳುವ ರಾಜಕಾರಣದ ಅರಿವಿದೆ. ಅವರಿಗೆ ಗೋಡ್ಸೆ ಸಿದ್ಧಾಂತವೇ ಚುನಾವಣೆ ಅಜೆಂಡಾವಾಗಿದೆ. ನಮಗೆ ಅಭಿವೃದ್ಧಿ ವಿಷಯವೇ ಅಜೆಂಡಾ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‍ನಿಂದ ಮಾಡಿರುವ ಕೆಲಸಗಳನ್ನು ಮುಂದಿಟ್ಟುಕೊಂಡು ಹೋಗುತ್ತೇವೆ. ಹಿಂದುತ್ವದ ಬಗ್ಗೆ ಹೇಳಿದ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡುವುದಾದರೆ, ಅವರಿಗೆ ಬೇರೆ ವಿಷಯವೇ ಉಳಿದಿಲ್ಲ ಎಂದಾಯಿತು ಎಂದರು.

ತನಿಖೆಯಾಗಲಿ
ಪೇಶ್ವೆ ವಂಶದವರು ಸಿಎಂ ಆಗುತ್ತಾರೆಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಯ ಬಗ್ಗೆ ಬಿಜೆಪಿ ಸರಕಾರ ತನಿಖೆ ನಡೆಸಲಿ. ಅದು ಬಿಟ್ಟು ವಿನಾ ಚರ್ಚೆ ಅಗತ್ಯವಿಲ್ಲ. ಎಲ್ಲ ಸಮುದಾಯಗಳಿಗೆ ಆದ್ಯತೆ ನೀಡುವ ಮೂಲಕ ಸರ್ವರ ಕಲ್ಯಾಣ ಬಯಸುವುದು ನಮ್ಮ ಪಕ್ಷದ ಅಜೆಂಡಾ ಎಂದರು.

ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಸಚಿವ ಶಿವರಾಜ್ ತಂಗಡಗಿ, ಮಸ್ಕಿ ಪರಾಜಿತ ಅಭ್ಯರ್ಥಿ ಆರ್.ತಿಮ್ಮಯ್ಯನಾಯಕ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವೈ.ಅನಿಲಕುಮಾರ್ ಸೇರಿದಂತೆ ಅನೇಕರು ಇದ್ದರು.