ಟರ್ಕಿ ಸಂತ್ರಸ್ತರಿಗೆ ಭಾರತೀಯ ವೈದ್ಯರೇ ದಾರಿದೀಪ; ದಿನವೊಂದಕ್ಕೆ 400 ಮಂದಿಗೆ ಚಿಕಿತ್ಸೆ

ಇಸ್ತಾಂಬುಲ್: ಭೂಕಂಪದಿಂದ ತತ್ತರಿಸಿಹೋಗಿರುವ ಟರ್ಕಿ ಜನರ ಪಾಲಿಗೆ ಭಾರತೀಯ ವೈದ್ಯರು ಅಕ್ಷರಶಃ ದಾರಿದೀಪದಂತಾಗಿದ್ದು, ತಾತ್ಕಾಲಿಕ ಆರೋಗ್ಯ ಕೇಂದ್ರಗಳಲ್ಲಿ ಹಗಲು ರಾತ್ರಿಯೆನ್ನದೆ ದಿನಕ್ಕೆ 400ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಕನಿಷ್ಠ ತಾಪಮಾನವು ಮೈನಸ್‌ಗೆ ತಲುಪಿರುವ ನಡುವೆಯೇ, 90 ಯೋಧರ ತಂಡ 60 ತಾತ್ಕಾಲಿಕ ಆಸ್ಪತ್ರೆಗಳನ್ನು ನಿರ್ಮಿಸಿದೆ. ಇದರಲ್ಲಿ 800ಕ್ಕೂ ಅಧಿಕ ಮಂದಿಗೆ ಚಿಕಿತ್ಸೆ ನೀಡಿದ್ದು,10 ಪ್ರಮುಖ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಲಾಗಿದೆ. ಭಾರತೀಯ ವೈದ್ಯರ ಪರಿಶ್ರಮಕ್ಕೆ ಟರ್ಕಿ ಜನರು ಧನ್ಯವಾದ ಅರ್ಪಿಸಿ, ನೀವು ನಮ್ಮ ಭರವಸೆ ಎಂದು ಭಾವುಕರಾಗಿದ್ದಾರೆ.
7ನೇ ವಿಮಾನ:
ಭಾರತದಿಂದ ಪರಿಹಾರ ಸಾಮ್ರಾಗಿ ಹೊತ್ತ 7ನೇ ವಿಮಾನ ಭಾನುವಾರ ಟರ್ಕಿ ತಲುಪಿದೆ. ಇದರಲ್ಲಿ 13 ಟನ್ ವೈದ್ಯಕೀಯ ನೆರವು, ಹೊದಿಕೆಗಳು, ವೆಂಟಿಲೇಟರ್‌ಗಳು ಸೇರಿ 24 ಟನ್ ಇತರೆ ಅಗತ್ಯ ಸಾಮಗ್ರಿಗಳೂ ಸೇರಿವೆ.
ಜೀವ ಲೆಕ್ಕಿಸದೇ ಮಕ್ಕಳ ರಕ್ಷಣೆ
ಭೂಕಂಪ ಸಂಭವಿಸಿದ ವೇಳೆ ಜನರು ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಓಡುತ್ತಿದ್ದರೆ, ಟರ್ಕಿಯ ಗಾಂಜಿಯಾಟೆಪ್‌ನ ಆಸ್ಪತ್ರೆಯೊಂದರಲ್ಲಿ ನಿಜಾಮ್ ಹಾಗೂ ಗಜ್ವಲ್ ಕ್ಯಾಲಿಸ್ಕನ್ ಎನ್ನುವ ಇಬ್ಬರು ನರ್ಸ್‌ಗಳು ತಮ್ಮ ಜೀವವನ್ನೂ ಲೆಕ್ಕಿಸದೇ ನವಜಾತ ಶಿಶುಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಈಗ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದೆ.
128 ಗಂಟೆ ಬಳಿಕ 2 ತಿಂಗಳ ಕಂದನ ರಕ್ಷಣೆ
ಇತ್ತೀಚೆಗೆ ಅವಶೇಷಗಳಡಿಯಲ್ಲಿ ಮಗುವೊಂದು ಜನಿಸಿದರೆ, ಇತ್ತ ಅದೇ ಅವಶೇಷಗಳಡಿಯಲ್ಲಿ 2 ತಿಂಗಳ ಹಸುಗೂಸೊಂದು ಜೀವ ಬಿಗಿಹಿಡಿದು ಜೀವಿಸಿದೆ. ಬರೋಬರಿ 128 ಗಂಟೆ ಬಳಿಕ ಆ ಕಂದನನ್ನು ರಕ್ಷಿಸಲಾಗಿದೆ. ರಕ್ಷಿಸಿದವರ ಬೆಚ್ಚಗಿನ ಕೈ ಸ್ಪರ್ಶದ ಬಳಿಕ ಹಾಲಿಗಾಗಿ ಹಾತೊರೆದು, ಬಾಯಿ ಚಪ್ಪರಿಸುವ ಮಗುವಿನ ಮುಗ್ಧಮುಖ ಟರ್ಕಿಯ ದುರಂತಕ್ಕೆ ವಿಧಿಯನ್ನು ಶಪಿಸುವಂತೆ ಮಾಡಿದೆ.