ಕೈ ಹಿಡಿಯಲು ಬಯಸಿದವರಿಗೆ ಮಣೆ, ಆಕಾಂಕ್ಷಿಗಳಿಗೆ ಆತಂಕ!; ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ದೆಹಲಿಯಲ್ಲಿ ಚರ್ಚೆ

ಕೈ ಹಿಡಿಯಲು ಬಯಸಿದವರಿಗೆ ಮಣೆ, ಆಕಾಂಕ್ಷಿಗಳಿಗೆ ಆತಂಕ!; ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ದೆಹಲಿಯಲ್ಲಿ ಚರ್ಚೆ

ವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ದೆಹಲಿಯಲ್ಲಿ ಸಭೆ ನಡೆಸಿದ್ದು, ಬಿಜೆಪಿ ಮುಖಂಡರ ವಿರೋಧ ಎದುರಿಸುತ್ತಿರುವ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್​ರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.

ಇಬ್ಬರೂ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವುದು ಕೈ ನಾಯಕರ ಅಂಬೋಣ. ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆದಿದ್ದು, ಚರ್ಚೆಯಾದ ಅಂಶಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅಥವಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಸಂಸದ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ.ಬಿ. ಪಾಟೀಲ್, ಸ್ಕ್ರೀನಿಂಗ್ ಸಮಿತಿ ಅಧ್ಯಕ್ಷ ಮೋಹನ್ ಪ್ರಕಾಶ್, ಮಾಜಿ ಸಂಸದ ವೀರಪ್ಪ ಮೊಯ್ಲಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಇತರರಿದ್ದರು.

184 ಸೀಟುಗಳ ಬಗ್ಗೆ ಚರ್ಚೆ: ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 184 ಸೀಟುಗಳ ಬಗ್ಗೆ ಚರ್ಚೆಯಾಗಿದೆ. ಎರಡನೇ ಹಂತದ ಸಭೆಯ ದಿನಾಂಕದ ಬಗ್ಗೆ ಮಾ.22ರ ನಂತರ ತೀರ್ವನಿಸಲು ಉದ್ದೇಶಿಸಲಾಗಿದೆ.

16 ಆಕಾಂಕ್ಷಿಗಳು ಒಟ್ಟಾಗಿ ಮನವಿ: ಮಂಡ್ಯ ಕ್ಷೇತ್ರದ ಟಿಕೆಟ್​ಗಾಗಿ ಕಳೆದೆರಡು ದಿನಗಳಿಂದ ದೆಹಲಿಯಲ್ಲಿ ಓಡಾಡುತ್ತಿರುವ ಆಕಾಂಕ್ಷಿಗಳು, ದಯವಿಟ್ಟು ಹೊರಗಿನಿಂದ ಬಂದವರಿಗೆ ಟಿಕೆಟ್ ಕೊಡಬೇಡಿ ಎಂದು ಶಾಸಕ ಡಾ. ಜಿ. ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ. ಪರಮೇಶ್ವರ್ ಕರ್ನಾಟಕ ಭವನಕ್ಕೆ ಅಗಮಿಸುತ್ತಿದ್ದಂತೆಯೇ ಅವರನ್ನು ಭೇಟಿ ಮಾಡಿದ ಆಕಾಂಕ್ಷಿಗಳು, ಈ ಬಾರಿ ಟಿಕೆಟ್​ಗಾಗಿ 16 ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಯಾರಿಗೆ ಬೇಕಾದರೂ ಟಿಕೆಟ್ ನೀಡಿ. ನಾವು ಅವರ ಪರ ಕೆಲಸ ಮಾಡುತ್ತೇವೆ. ಹಲವು ವರ್ಷಗಳಿಂದ ನಾವು ಪಕ್ಷಕ್ಕಾಗಿ ಶ್ರಮಿಸಿದವರು. ಹೊರಗಿನಿಂದ ಬಂದವರಿಗೆ ಮಾನ್ಯತೆ ನೀಡಬೇಡಿ ಎಂದು ಕೋರಿದ್ದಾರೆ.

ಶ್ಯಾಮನೂರಿಗೂ ವಿರೋಧ: 92 ವರ್ಷದ ಮಾಜಿ ಸಚಿವ, ಹಾಲಿ ಶಾಸಕ ಶ್ಯಾಮನೂರು ಶಿವಶಂಕರಪ್ಪಗೆ ಟಿಕೆಟ್ ಕೊಡಬೇಡಿ. ಇನ್ನಾದರೂ ಯುವಕರನ್ನು ಪರಿಗಣಿಸಿ ಎಂದು ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಇಬ್ರಾಹಿಂ ಖಾಲಿದ್ ಮನವಿ ಮಾಡಿದ್ದಾರೆ. ಕಳೆದ ಬಾರಿಯೇ ಇದು ನನ್ನ ಕೊನೆಯ ಚುನಾವಣೆ ಎಂದಿದ್ದರು. ಹಾಗಾಗಿ, ನಾವೆಲ್ಲರು ಒಗ್ಗಟ್ಟಾಗಿ ಕೆಲಸ ಮಾಡಿದ್ದೆವು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತಿಹೆಚ್ಚು ಅಲ್ಪ ಸಂಖ್ಯಾತರು, ಹಿಂದುಳಿದವರು ಇದ್ದಾರೆ. ನಮ್ಮ ಸಮುದಾಯ ಹಲವು ಬಾರಿ ಟಿಕೆಟ್ ಕೇಳಿದೆ. ಅದನ್ನು ವರಿಷ್ಠರು ಪರಿಗಣಿಸಬೇಕು ಎಂದಿದ್ದಾರೆ.

ಚಿಕ್ಕಪೇಟೆ ಟಿಕೆಟ್ ಆರ್​ವಿಗೆ ಬೇಡ: ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಆರ್.ವಿ. ದೇವರಾಜ್​ಗೆ ಟಿಕೆಟ್ ನೀಡಬಾರದು ಎಂದು ಚಿಕ್ಕಪೇಟೆ ವ್ಯಾಪ್ತಿಯ 6 ಕಾಂಗ್ರೆಸ್ ಮುಖಂಡರು ಖರ್ಗೆಗೆ ಪತ್ರ ನೀಡಿದ್ದಾರೆ. ಮುಖಂಡರಾದ ಉದಯ್ ಶಂಕರ್, ಗಂಗಾಂಬಿಕಾ ಮಲ್ಲಿಕಾರ್ಜುನ್, ಬಿ.ಎಸ್. ಕಿರಣ್ ಕುಮಾರ್, ಇಮ್ತಿಯಾಸ್ ಪಾಷಾ, ಅಮರೇಶ ಪಾಪಣ್ಣ, ಮನೋಜ್ ಚಂದ್ರಪ್ಪ ಈ ಪತ್ರದಲ್ಲಿ ಸಹಿ ಹಾಕಿದ್ದಾರೆ. ಹೊಸಬರಿಗೆ ಅವಕಾಶ ನೀಡಿದರೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಹಾಗಾಗಿ ನಮ್ಮ ಮನವಿ ಪರಿಗಣಿಸಬೇಕು ಎಂದಿದ್ದಾರೆ.

ದೆ: ಈ ಯಂತ್ರವೊಂದಿದ್ದರೆ ಸಾಕು, ಕಳ್ಳರಿಗೆ 'ಹೊಗೆ'ನೇ; ಕಳವಿಗೆ ಬಂದವರು ಧೂಮಕ್ಕೆ ಹೆದರಿ ಪರಾರಿ!?

ಟಿಕೆಟ್ ಬೇಡ ಎಂದು ಕಣ್ಣೀರು: ಬಳ್ಳಾರಿ ನಗರ ಟಿಕೆಟ್ ಆಕಾಂಕ್ಷಿಯಾಗಿರುವ ಕಾಂಗ್ರೆಸ್​ನ ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಪುತ್ರ ನಾರಾ ಭರತ್ ರೆಡ್ಡಿ ಬೆಂಬಲಿಗರ ಮೂಲಕ ಕೊಲೆ ಬೆದರಿಕೆ ಹಾಕಿದ್ದು, ಅವರಿಗೆ ಟಿಕೆಟ್ ನೀಡಬೇಡಿ ಎಂದು ಅರುಣಾ ರೆಡ್ಡಿ ಮತ್ತು ಪೂರ್ಣಿಮಾ ರೆಡ್ಡಿ ಎಂಬುವರು ಕಣ್ಣೀರು ಹಾಕುತ್ತಾ ನಾಯಕರಿಗೆ ಮನವಿ ಮಾಡಿದ್ದಾರೆ.

ಎಂಐಎಂ, ಎಸ್​ಡಿಪಿಐ ಬಗ್ಗೆ ಮಾತುಕತೆ: ಕೇಂದ್ರ ಚುನಾವಣಾ ಸಮಿತಿ ಸಭೆ ಬಳಿಕ ಖರ್ಗೆ ಅಧಿಕೃತ ನಿವಾಸದಲ್ಲಿ ರಾಜ್ಯ ಕಾಂಗ್ರೆಸ್ ನಾಯಕರ ಜತೆ ಪ್ರತ್ಯೇಕ ಸಭೆ ನಡೆಸಲಾಗಿದೆ. ಖರ್ಗೆ ಅವರು ಚುನಾವಣಾ ತಂತ್ರಜ್ಞ ಸುನಿಲ್ ಕುನಗೋಲು ಕರೆಸಿ ಸಭೆ ನಡೆಸಿದ್ದು, ಅಸಾದುದ್ದೀನ್ ಓವೈಸಿ ನೇತೃತ್ವದ ಎಂಐಎಂ ಮತ್ತು ಎಸ್​ಡಿಪಿಐ ಪಕ್ಷದ ಪ್ರಭಾವದ ಬಗ್ಗೆ ಗಂಭೀರ ಮಾತುಕತೆ ನಡೆಸಲಾಗಿದೆ. ಈ ಎರಡೂ ಪಕ್ಷಗಳ ಪ್ರಭಾವ ಹೆಚ್ಚುತ್ತಿರುವುದರಿಂದ ಕಾಂಗ್ರೆಸ್​ಗೆ ಮುಸ್ಲಿಂ ವೋಟ್ ಕೈತಪ್ಪುವ ಭೀತಿ ಇರುವುದರಿಂದ, ಮುಸ್ಲಿಂ ಮತಗಳ ರಕ್ಷಣೆಗೆ ನಾವೇನು ಮಾಡಬೇಕು ಎಂಬ ಬಗ್ಗೆ ನಾಯಕರು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.