ಕೋವಿಡ್-19 ನಿರೋಧಕ ಔಷಧ ಮೋಲ್ನುಪಿರಾವಿರ್ ನ ಸುರಕ್ಷತೆ ಕುರಿತು ICMR ಆತಂಕ

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆಯು ತೀವ್ರ ಮಟ್ಟಕ್ಕೆ ಏರಿಕೆ ಕಂಡಿದೆ. ಹೀಗಾಗಿ ಕೋವಿಡ್-19 ತಡೆಗೆ ವೈರಾಣು ನಿರೋಧಕ ಔಷಧ ಮೋಲ್ನುಪಿರಾವಿರ್ ಸುರಕ್ಷತೆಯ ಕುರಿತು ಐಸಿಎಂ ಆರ್ ನ ಮುಖ್ಯಸ್ಥ ಬಲರಾಮ್ ಭಾರ್ಗವ ಆತಂಕ ವ್ಯಕ್ತಪಡಿಸಿದ್ದಾರೆ.
ಕೋವಿಡ್-19 ಚಿಕಿತ್ಸೆಗಾಗಿ ಪ್ರಕಟಿಸಲಾಗಿರುವ ರಾಷ್ಟ್ರೀಯ ಶಿಷ್ಟಾಚಾರದಲ್ಲಿ ಈ ಔಷಧವನ್ನು ಸೇರಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಳೆ, ಬಲರಾಮ್ ಭಾರ್ಗವ ಅವರು ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಬ್ರಿಟನ್ ನ್ನೂ ಉಲ್ಲೇಖಿಸಿದ್ದು, ಅಲ್ಲಿಯೂ ಸಹ ಚಿಕಿತ್ಸೆಗಾಗಿ ಮೋಲ್ನುಪಿರಾವರ್ ನ್ನು ಶಿಫಾರಸು ಮಾಡಿಲ್ಲ. 'ಈ ಔಷಧದ ಸುರಕ್ಷತೆ ಬಗ್ಗೆ ಆತಂಕಗಳಿವೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು, ಇದು ಟೆರಾಟೋಜೆನಿಸಿಟಿ, ಮ್ಯುಟಾಜೆನಿಸಿಟಿ ಸಮಸ್ಯೆಗಳನ್ನು ಉಂಟುಮಾಡಬಲ್ಲದು, ಅಷ್ಟೇ ಅಲ್ಲದೇ ಕಾರ್ಟಿಲೆಜ್ ಹಾಗೂ ಸ್ನಾಯುಗಳಿಗೂ ಹಾನಿ ಉಂಟುಮಾಡಬಲ್ಲದು.
'ಈ ಔಷಧಗಳನ್ನು ಸೇವಿಸಿದ ಪುರುಷ ಅಥವಾ ಮಹಿಳೆಯರು ಮೂರು ತಿಂಗಳ ಕಾಲ ಗರ್ಭನಿರೋಧಕ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಏಕೆಂದರೆ ಟೆರಾಟೋಜೆನಿಕ್ ಪ್ರಭಾವದಿಂದ ಜನಿಸುವ ಮಕ್ಕಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬಹುದು' ಎಂದು ವರದಿಗಾರರಿಗೆ ಬಲರಾಮ್ ಬಾರ್ಗವ ತಿಳಿಸಿದ್ದಾರೆ.
'ಅಮೆರಿಕಾದಲ್ಲಿ ಸೌಮ್ಯ, ಮಧ್ಯಮ ಪ್ರಮಾಣದ ರೋಗಲಕ್ಷಣಗಳನ್ನು ಎದುರಿಸುತ್ತಿದ್ದ 1,433 ರೋಗಿಗಳಲ್ಲಿ ಈ ಔಷಧದಿಂದ ಶೇ.3 ರಷ್ಟು ರೋಗಲಕ್ಷಣಗಳು ಕಡಿಮೆಯಾಗಿರುವುದರ ಆಧಾರದಲ್ಲಿ ಈ ಔಷಧಕ್ಕೆ ಅನುಮೋದನೆ ನೀಡಲಾಗಿದೆ' ಎಂದು ಭಾರ್ಗವ ತಿಳಿಸಿದ್ದಾರೆ.