ಜ.8ರೊಳಗೆ 15ರಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ

ಜ.8ರೊಳಗೆ 15ರಿಂದ 18 ವರ್ಷದ ಎಲ್ಲಾ ಮಕ್ಕಳಿಗೆ ಲಸಿಕೆ

ಬೆಂಗಳೂರು, ಜ.6- ಇದೇ ಜನವರಿ 8ರೊಳಗೆ ದೇಶದ ಎಲ್ಲ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ನಿರೋಧಕ ಲಸಿಕೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಸವೇಶ್ವರ ನಗರದ ಕಿರ್ಲೋಸ್ಕರ್ ಕಾಲೋನಿಯಲ್ಲಿರುವ ಶ್ರೀ ಅರಬಿಂದೋ ವಿದ್ಯಾ ಮಂದಿರದಲ್ಲಿಂದು ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

135 ಕೋಟಿ ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ದೇಶದಲ್ಲಿ ವ್ಯಾಪಕವಾಗಿ ಲಸಿಕೆ ನೀಡುವುದು ಕಷ್ಟದ ಕೆಲಸವಾಗಿತ್ತು. ಆದರೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇದನ್ನು ಸವಾಲಾಗಿ ಸ್ವೀಕರಿಸಿ ನಮ್ಮ ದೇಶದ ಎಲ್ಲರಿಗೂ ಲಸಿಕೆ ನೀಡಿ ಕೋವಿಡ್ ಮುಕ್ತ ದೇಶವನ್ನಾಗಿ ಮಾಡಲು ಪಣತೊಟ್ಟಿದ್ದಾರೆ ಎಂದರು.

ಅಮೆರಿಕಾ ಸೇರಿದಂತೆ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಇಂದು ನಿತ್ಯ ಲಕ್ಷ ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗುತ್ತಿವೆ. ಅಂತಹ ಪರಿಸ್ಥಿತಿ ನಮ್ಮಲ್ಲಿ ಇಲ್ಲ. ಇದು ಸಾಧ್ಯವಾಗಿದ್ದು ಲಸಿಕೆ ನೀಡಿಕೆಯಿಂದ. ಆದರೂ ಸರ್ಕಾರ ಮುಂಜಾಗ್ರತಾ ಕ್ರಮವಾಗಿ ಕೊರೊನಾ ಹತೋಟಿಗೆ ಕಠಿಣ ನಿರ್ಬಂಧಗಳು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದರು.

ಈಗಾಗಲೇ ಎರಡು ಅಲೆಗಳನ್ನು ಎಲ್ಲರೂ ಸೇರಿ ಎದುರಿಸಿದ್ದೇವೆ. ಇದೀಗ ಮೂರನೆ ಅಲೆ ಬಂದಿದ್ದು, ಇದನ್ನೂ ಕೂಡ ಮೆಟ್ಟಿ ನಿಲ್ಲಬೇಕಿದೆ. ಇದಕ್ಕಾಗಿ ಲಸಿಕೆಯನ್ನು ಎಲ್ಲರೂ ಕಡ್ಡಾಯವಾಗಿ ಪಡೆಯಲೇಬೇಕು. ಮೊದಲ ಡೋಸ್ ಲಸಿಕೆ ನೀಡಿದ 28 ದಿನಗಳ ನಂತರ ಎರಡನೆ ಡೋಸ್ ನೀಡಲು ಮತ್ತೆ ಎಲ್ಲ ಶಾಲಾ-ಕಾಲೇಜುಗಳಿಗೆ ತೆರಳಲಾಗುವುದು. ಎರಡನೇ ಡೋಸ್ ನೀಡಿಕೆ ವೇಳೆ ಕಫ್ರ್ಯೂ ಸೇರಿದಂತೆ ಕಠಿಣ ನಿಯಮಗಳು ಇದ್ದರೂ ಕೂಡ ಎಲ್ಲರೂ ಬಂದು ಲಸಿಕೆ ಪಡೆಯಬೇಕು ಎಂದು ಅವರು ಸೂಚಿಸಿದರು.

ನಾವು ಮಾನಸಿಕವಾಗಿ ಕೋವಿಡ್ ಓಡಿಸಲು ಸಿದ್ಧರಾಗಿದ್ದರೆ ಅದರಿಂದ ನಮಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪೆÇೀಷಕರು ಹಾಗೂ ಮನೆಯ ಹಿರಿಯರಿಗೆ ಈ ಕುರಿತು ಮನವರಿಕೆ ಮಾಡಿಕೊಡುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಉತ್ತರ ಜಿಲ್ಲಾ ಘಟಕದ ಉಪಾಧ್ಯಕ್ಷ ಜಯರಾಮಯ್ಯ, ಅವಿನ್ ಆರಾಧ್ಯ, ಅರಬಿಂದೋ ಶಾಲೆಯ ಪ್ರಾಂಶುಪಾಲರು, ಸಿಬ್ಬಂದಿಗಳು ಉಪಸ್ಥಿತರಿದ್ದರು.