ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ"

ಬೆಂಗಳೂರು: ಜಾತಿ-ಧರ್ಮಗಳ ನಡುವೆ ಜಗಳ ಹಚ್ಚಿ ಚುನಾವಣೆಯಲ್ಲಿ ಲಾಭ ಗಳಿಸುವ ದುರುದ್ದೇಶದ, ತಪ್ಪು ಮಾಹಿತಿ ಆಧರಿಸಿದ ಮತ್ತು ಸಂವಿಧಾನ ವಿರೋಧಿಯಾದ ಪರಿಷ್ಕೃತ ಮೀಸಲಾತಿಯನ್ನು ಪ್ರಕಟಿಸಿರುವ ರಾಜ್ಯ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
ಚುನಾವಣೆ ಘೋಷಣೆಗೆ ದಿನ ಎಣಿಕೆ ನಡೆಯುತ್ತಿರುವಾಗ ಅವಸರದಲ್ಲಿ ಪ್ರಕಟಿಸಲಾಗಿರುವ ಮೀಸಲಾತಿ ನೀತಿ ದೋಷಪೂರ್ಣವಾಗಿದ್ದು ಅನುಷ್ಠಾನಗೊಳಿಸಲು ಸಮಯವಕಾಶವೇ ಇಲ್ಲ. ವಿಶ್ವಾಸಾರ್ಹ ಮಾಹಿತಿ ಇಲ್ಲದ ಈ ಮೀಸಲಾತಿ ನೀತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೆ ರದ್ದಾಗುವುದು ಖಂಡಿತ.
ಅವಕಾಶ ವಂಚಿತರಿಗೆ ವಿಶೇಷ ಸವಲತ್ತು ನೀಡಿ, ಅವರನ್ನು ಕೂಡ ಮುಖ್ಯವಾಹಿನಿಗೆ ತರಬೇಕು ಎನ್ನುವುದು ಸಂವಿಧಾನದ 14ನೇ ಪರಿಚ್ಛೇದದ ಆಶಯವಾಗಿದೆ. 15 ಮತ್ತು 16ನೇ ಪರಿಚ್ಛೇದವು ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಿದೆ.ಪರಿಷ್ಕೃತ ಮೀಸಲಾತಿ ನೀತಿ ಇದಕ್ಕೆ ವಿರುದ್ಧವಾಗಿದೆ.ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತದೆ ಅಲ್ಲಿಯವರೆಗೆ ಮೀಸಲಾತಿ ಇರಬೇಕು ಎಂದು ಬಾಬಾ ಸಾಹೇಬರು ಹೇಳಿದ್ದಾರೆ. ಜಾತಿ ವ್ಯವಸ್ಥೆ ಇರುವುದರಿಂದಲೇ ಅಸಮಾನತೆ ನಿರ್ಮಾಣವಾಗಿರುವುದು.ಇನ್ನೂ ಎಷ್ಟು ಕಾಲ ಮೀಸಲಾತಿ ಪದ್ಧತಿ ಇರಬೇಕು ಎಂದು ವ್ಯಂಗ್ಯವಾಡುವವರು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಮೇ 1995ರಿಂದ ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡಲಾಗಿದೆ. ಇದನ್ನು ರದ್ದು ಮಾಡಿ ಎಂದು ಈ ವರೆಗೆ ಯಾವುದೇ ನ್ಯಾಯಾಲಯದ ತೀರ್ಪು ಬಂದಿಲ್ಲ, ಯಾವ ಸಮಿತಿಯ ವರದಿಗಳು ಬಂದಿಲ್ಲ. ಹೀಗಿರುವಾಗ ರಾಜ್ಯ ಸರ್ಕಾರ ಯಾಕೆ ಮುಸ್ಲಿಂಮರ ಮೀಸಲಾತಿ ರದ್ದು ಮಾಡುವ ನಿರ್ಧಾರ ಕೈಗೊಂಡಿದೆ.ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ.ಮುಸ್ಲಿಂಮರಿಗೆ ಈಗಲೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ. 13% ಇರುವ ಮುಸ್ಲಿಮರಿಗೆ ಅಲ್ಪಸಂಖ್ಯಾತರೊಟ್ಟಿಗೆ 4% ಮೀಸಲಾತಿ ನೀಡಲಾಗಿತ್ತು,ಈಗ ಅದನ್ನು ಕಿತ್ತುಹಾಕಲಾಗಿದೆ ಎಂದು ಕಿಡಿ ಕಾರಿದರು.
ಮುಸ್ಲಿಂಮರ ಮೀಸಲಾತಿ ರದ್ದುಗೊಳಿಸಿ @BJP4Karnataka ದ್ವೇಷದ ರಾಜಕಾರಣ ಮಾಡುತ್ತಿದೆ. ಮುಸ್ಲಿಂಮರಿಗೆ ಈಗಲೂ ಅವರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಲಾಗಿಲ್ಲ. 13% ಇರುವ ಮುಸ್ಲಿಮರಿಗೆ ಅಲ್ಪಸಂಖ್ಯಾತರೊಟ್ಟಿಗೆ 4% ಮೀಸಲಾತಿ ನೀಡಲಾಗಿತ್ತು. ಈಗ ಅದನ್ನೂ ಕಿತ್ತುಹಾಕಲಾಗಿದೆ. 6/20#ಸಾಮಾಜಿಕನ್ಯಾಯ
ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು, ವೀರಶೈವ ಲಿಂಗಾಯತರು 15% ಮೀಸಲಾತಿ ಮತ್ತು ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. ಒಟ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿ ಈ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಿತ್ತು.
1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ 50% ಮೀರಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು, ರಾಜ್ಯದಲ್ಲಿ ಈಗ ಮೀಸಲಾತಿ 50% ಇದರಲ್ಲಿ ಬದಲಾವಣೆಯನ್ನು ಸಂಸತ್ ಮಾತ್ರ ಮಾಡಲು ಸಾಧ್ಯ. ಅದು ಊರ್ಜಿತವಾಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕಾಗಿದೆ.ಹಿಂದುಳಿದ ವರ್ಗಗಳ ಪಟ್ಟಿಯಿಂದ ಯಾವುದೇ ಜಾತಿಯನ್ನು ತೆಗೆದುಹಾಕಲು ಮತ್ತು ಸೇರಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಶಿಫಾರಸು ಬೇಕು. ಅಲ್ಪಸಂಖ್ಯಾತರನ್ನು ಮೀಸಲಾತಿಯಿಂದ ತೆಗೆದುಹಾಕಿ ಎಂದು ಯಾವ ಆಯೋಗ ವರದಿ ನೀಡಿದೆ? ಇದು ಅಲ್ಪಸಂಖ್ಯಾತರಿಗೆ ಮಾಡುತ್ತಿರುವ ಅನ್ಯಾಯ ಅಲ್ಲವಾ? 1995ರಿಂದ ಮುಸ್ಲಿಮರಿಗೆ ರಾಜ್ಯದಲ್ಲಿ ನೀಡುತ್ತಿದ್ದ ಮೀಸಲಾತಿಯನ್ನು ಈಗ ತೆಗೆದುಹಾಕಲು ಕಾರಣವೇನು? ಅವರನ್ನು ಆರ್ಥಿಕವಾಗಿ ಹಿಂದುಳಿದವರಿಗೆ ನೀಡುವ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಮುಸ್ಲಿಮರಲ್ಲಿ ಯರಾದರೂ ಬದಲಾವಣೆ ಕೇಳಿದ್ದಾರಾ? ಎಂದು ಅವರು ಪ್ರಶ್ನಿಸಿದರು.
ಎಸ್ ಸಿ ಮತ್ತು ಎಸ್ ಟಿ ಮೀಸಲಾತಿ ಹೆಚ್ಚಳಕ್ಕಾಗಿ ನಮ್ಮ ಸರ್ಕಾರದ ಅವಧಿಯಲ್ಲಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಅದು 2020ರಲ್ಲಿ ವರದಿ ನೀಡಿತ್ತು, ವರದಿ ಬಂದು 3 ವರ್ಷ ಕಳೆದರೂ ನಿದ್ದೆ ಮಾಡುತ್ತಿದ್ದ ರಾಜ್ಯ ಸರ್ಕಾರ ಈಗ ಎದ್ದು ಕೂತಿದೆ.ಎಸ್ ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಲು ವಾಲ್ಮೀಕಿ ಸಮುದಾಯದ ಸ್ವಾಮಿಗಳು 257 ದಿನಗಳ ಕಾಲ ಧರಣಿ ನಡೆಸಿದ್ದರು. ನಮ್ಮ ಪಕ್ಷದಲ್ಲಿರುವ ಎಸ್,ಸಿ ಹಾಗೂ ಎಸ್,ಟಿ ಮತ್ತು ಹಿಂದುಳಿದ ಜಾತಿಗಳ ಶಾಸಕರು ಸದನದಲ್ಲಿ ಪ್ರತಿಭಟನೆ ಮಾಡಿದರು. ಅದರ ನಂತರ ಸರ್ಕಾರ ಸರ್ವಪಕ್ಷಗಳ ಸಭೆ ಕರೆದಿತ್ತು.
ಮೀಸಲಾತಿ ಪ್ರಮಾಣ ಹೆಚ್ಚಳದ ಬಗ್ಗೆ ರಾಜ್ಯ ಸರ್ಕಾರವೇ ತೀರ್ಮಾನ ಕೈಗೊಂಡರೆ ಅದು ಇಂದಿರಾ ಸಹಾನಿ ಪ್ರಕರಣದ ತೀರ್ಪಿನ ಉಲ್ಲಂಘಣೆಯಾಗುತ್ತದೆ. ಇದಕ್ಕಾಗಿ ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕು ಮತ್ತು ಅದನ್ನು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು ಎಂದು ಸರ್ವಪಕ್ಷ ಸಭೆಯಲ್ಲಿ ಸರ್ಕಾರಕ್ಕೆ ಸ್ಪಷ್ಟವಾಗಿ ಹೇಳಿದ್ದೆ.ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಒಳ ಮೀಸಲಾತಿಯನ್ನು ಒಪ್ಪಿಕೊಂಡು ಸುಗ್ರಿವಾಜ್ಞೆ ಹೊರಡಿಸಿತ್ತು. ಅದರ ನಂತರ ಸಂಪುಟದ ತೀರ್ಮಾನವನ್ನು ಕೇಂದ್ರ ಸರ್ಕಾರಕ್ಕೆ ಕಳಿಸದೆ ರಾಜ್ಯ ಸರ್ಕಾರ ಯಾಕೆ ವಿಳಂಬ ಮಾಡಿದೆ? ನಮ್ಮ ಪ್ರತಿಭಟನೆಯ ನಂತರ ನಾಲ್ಕು ದಿನಗಳ ಹಿಂದೆ ಕೇಂದ್ರಕ್ಕೆ ಕಳಿಸಿಕೊಟ್ಟಿದೆ.
ಬಿಜೆಪಿ ಎಂದಿಗೂ ಸಾಮಾಜಿಕ ನ್ಯಾಯದ ಪರವಾಗಿ ಇಲ್ಲ. ಮಂಡಲ್ ಕಮಿಷನ್ ವರದಿ, ಉನ್ನತ ಶಿಕ್ಷಣದಲ್ಲಿ ಮೀಸಲಾತಿ ನೀಡುವುದನ್ನು ವಿರೋಧ ಮಾಡಿದ್ದು ಬಿಜೆಪಿಯವರೇ. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ತಂದಾಗ ಅದನ್ನು ವಿರೋಧಿಸಿ ರಾಮಾ ಜೋಯಿಸ್ ಅವರು ಸುಪ್ರೀಂ ಕೋರ್ಟ್ ಗೆ ಹೋಗಿದ್ದರು.ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ, ಹಿಂದುಳಿದವರಿಗೆ ಮೀಸಲಾತಿ ನೀಡಿದಾಗ ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿ ಸ್ವತಃ ರಾಮಾ ಜೋಯಿಸ್ ಅವರೇ ವಾದ ಮಾಡಿದ್ದರು, ಆಗ ಯಡಿಯೂರಪ್ಪ, ಈಶ್ವರಪ್ಪ ಎಲ್ಲಿದ್ದರು? ಈ ರಾಮಾಜೋಯಿಸ್ ಬಿಜೆಪಿಯ ರಾಜ್ಯಸಭಾ ಸದಸ್ಯರಾಗಿರಲಿಲ್ವಾ? ಎಂದು ಪ್ರಶ್ನಿಸಿದರು.
ಸ್ವಾತಂತ್ರ್ಯ ನಂತರ ನಮ್ಮ ದೇಶ ಸಂವಿಧಾನವನ್ನು ಒಪ್ಪಿಕೊಳ್ಳುವಾಗ ಆರ್.ಎಸ್.ಎಸ್ ನ ಮುಖವಾಣಿ ಪತ್ರಿಕೆಗಳು ಅದನ್ನು ವಿರೋಧಿಸಿ ಲೇಖನಗಳನ್ನು ಪ್ರಕಟಿಸಿದ್ದವು. ಆರ್.ಎಸ್.ಎಸ್ ನ ಆದರ್ಶ ಪುರುಷರಾದ ಗೋಲ್ವಾಲ್ಕರ್, ಸಾವರ್ಕರ್ ಕೂಡಾ ಮೀಸಲಾತಿಯನ್ನು ವಿರೋಧಿಸಿದ್ದರು. ಮೀಸಲಾತಿ ಪರಿಷ್ಕರಿಸಲು ಸರ್ಕಾರದ ಬಳಿ ಯಾವ ವಿಶ್ವಾಸಾರ್ಹ ಮಾಹಿತಿ ಇದೆ? ಇಂತಹ ವರದಿಗಳು ಇಲ್ಲದ ಕಾರಣಕ್ಕೆ ಮಹಾರಾಷ್ಟ್ರ ಹರಿಯಾಣ ಮೊದಲಾದ ರಾಜ್ಯಗಳಲ್ಲಿ ಮೀಸಲಾತಿ ಪರಿಷ್ಕರಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ. ರಾಜ್ಯದ ಪರಿಷ್ಕೃತ ಮೀಸಲಾತಿ ನೀತಿಗೂ ಅದೇ ಗತಿ ಆಗಲಿದೆ.ಕಾಂಗ್ರೆಸ್ ಸದಾ ಸಾಮಾಜಿಕ ನ್ಯಾಯದ ಪರ ಇರುವ ಪಕ್ಷ. ನಾವು ಯಾವುದೇ ಜಾತಿ, ಧರ್ಮ, ಲಿಂಗದ ಜನರಿಗೆ ತಾರತಮ್ಯ ಮಾಡದೆ ರಕ್ಷಣೆ ಸಿಗಬೇಕು ಎಂದು ಪ್ರತಿಪಾದಿಸುವವರು.
ಎಲ್ಲಾ ಕಾಲದಲ್ಲೂ ಮೀಸಲಾತಿ ನೀಡಿದವರು, ಅವಕಾಶವಂಚಿತರಿಗೆ ಮೀಸಲಾತಿ ಕಲ್ಪಿಸಲು ಸಂವಿಧಾನ ತಿದ್ದುಪಡಿ ಮಾಡಿದವರು ನಾವೆ.ಮೀಸಲಾತಿ ವಿಷಯದಲ್ಲಿ ಬಿಜೆಪಿ ಮಾಡಿರುವ ಏಕೈಕ ಸಂವಿಧಾನ ತಿದ್ದುಪಡಿ ಎಂದರೆ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಿರುವುದು. ಬಿಜೆಪಿ ಪಕ್ಷ ಎಂದಾದರೂ ಪ್ರಾಮಾಣಿಕವಾಗಿ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಪರ ಮಾತನಾಡಿದೆಯೇ? ಎಂದು ಪ್ರಶ್ನಿಸಿದರು.