ಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನ

ಸಲ್ಮಾನ್ ಖಾನ್ ಬದಲು ಕಷ್ಟದ ಸ್ಟಂಟ್ ಮಾಡ್ತಿದ್ದ ಸಲ್ಲು ಡೂಪ್ಲಿಕೇಟ್ ಸಾಗರ್ ಪಾಂಡೆ ನಿಧನ

ಸಿನಿಮಾಗಳಲ್ಲಿ ನಟರು ಎತ್ತರದ ಕಟ್ಟಡಗಳಿಂದ ಜಿಗಿಯುತ್ತಾರೆ, ಕಾರಿನ ಮೇಲೆ ಹಾಗೆಯೇ ಉರುಳಿ ನಿಬ್ಬೆರಗಾಗಿ ನೋಡುವಂತ ಸಾಹಸಗಳನ್ನು ಮಾಡ್ತಾರೆ. ಆದರೆ ಇದನ್ನೆಲ್ಲಾ ನಟರೇ ಮಾಡುವುದಿಲ್ಲ. ಚಿತ್ರರಂಗಗಳಲ್ಲಿ ಸಾಹಸ ದೃಶ್ಯಗಳಲ್ಲಿ ಸ್ವತಃ ತಾವೇ ಅಭಿನಯಿಸಿರುವ ನಟರುಗಳ ಸಂಖ್ಯೆ ತೀರಾ ಕಡಿಮೆ.ಬಹುತೇಕ ಸ್ಟಾರ್ ನಟರ ಬದಲಾಗಿ ಅವರ ದೇಹ ಹಾಗೂ ಲುಕ್ ಇರುವ ವ್ಯಕ್ತಿ ಸಾಹಸ ದೃಶ್ಯಗಳಲ್ಲಿ ಅಭಿನಯಿಸಿರುತ್ತಾರೆ.

ಫೈಟ್ ಸೀನ್‌ಗಳಲ್ಲಿ ನಟನ ಮುಖ ಕಾಣದ ಹಾಗೆ ತೋರಿಸುವ ಕಷ್ಟಕರ ದೃಶ್ಯಗಳಲ್ಲಿ ಅಭಿನಯಿಸುವುದು ಇದೇ ವ್ಯಕ್ತಿಗಳು. ಇವರುಗಳನ್ನು ನಟನ ಡೂಪ್ಲಿಕೇಟ್ ಅಥವಾ ಡೂಪ್ ಎಂದು ಕರೆಯುತ್ತಾರೆ.

ಹೀಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಕುಚ್ ಕುಚ್ ಹೋತಾ ಹೈ, ದಬಾಂಗ್, ಟ್ಯೂಬ್ ಲೈಟ್ ಹಾಗೂ ಭಜರಂಗಿ ಭಾಯ್‌ಜಾನ್ ಇನ್ನೂ ಮುಂತಾದ ಚಿತ್ರಗಳಲ್ಲಿ ಸಲ್ಮಾನ್ ಖಾನ್ ಬದಲಾಗಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದ ಸಲ್ಮಾನ್‌ರ ಬಾಡಿ ಡಬಲ್ ಸಾಗರ್ ಪಾಂಡೆ ನಿನ್ನೆ ( ಸೆಪ್ಟೆಂಬರ್ 30 ) ಇಹಲೋಕ ತ್ಯಜಿಸಿದ್ದಾರೆ. 45 ವರ್ಷ ವಯಸ್ಸಿನ ಸಾಗರ್ ಪಾಂಡೆ ಜಿಮ್‌ನಲ್ಲಿ ವ್ಯಾಯಾಮ ಮಾಡುವ ವೇಳೆ ಹೃದಯಾಘಾತಕ್ಕೆ ಒಳಗಾದ ಕಾರಣ ಸಾವನ್ನಪ್ಪಿದ್ದಾರೆ.

ಈ ಕುರಿತು ಮಾತನಾಡಿದ ಶಾರುಖ್ ಖಾನ್‌ ಅವರ ಬಾಡಿ ಡಬಲ್ ಪ್ರಶಾಂರ್ ವಾಲ್ಡೆ "ಸಾಗರ್ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಮುಂಬೈನ ಜೋಗೇಶ್ವರಿ ಪೂರ್ವದಲ್ಲಿರುವ ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಟ್ರಾಮಾ ಕೇರ್ ಮುನ್ಸಿಪಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಯೇ ಅವರು ಸತ್ತಿದ್ದಾರೆ ಎಂದು ಘೋಷಿಸಲಾಯಿತು" ಎಂದಿದ್ದಾರೆ.

ಇನ್ನು ಈ ಕುರಿತು ಸಲ್ಮಾನ್ ಖಾನ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾಗರ್ ಪಾಂಡೆ ಜತೆಗಿನ ತಮ್ಮ ಚಿತ್ರವನ್ನು ಹಂಚಿಕೊಂಡಿದ್ದು 'ನನ್ನ ಜತೆ ಇದ್ದದ್ದಕ್ಕೆ ಧನ್ಯವಾದಗಳು ಸಾಗರ್, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.