ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನ

ನವದೆಹಲಿ, ಫೆ 1: ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಫೆಬ್ರವರಿ ಒಂದರಂದು ಮಂಡನೆಯಾಗಲಿರುವ 2023ರ ಬಜೆಟ್ ಹೊಸ ಘಟನೆಯೊಂದಕ್ಕೆ ಸಾಕ್ಷಿಯಾಗಲಿದೆ. ಬಜೆಟ್ ಅಧಿವೇಶನ ಮಂಗಳವಾರ ( ಜ 31) ಆರಂಭವಾಗಿದೆ.
ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್ಡಿಎ ಮೈತ್ರಿಕೂಟದ ಸರಕಾರದ ಪೂರ್ಣಪ್ರಮಾಣದ ಕೊನೆಯ ಬಜೆಟ್ ಇದಾಗಲಿದೆ.
1947ರ ನಂತರ ಇದೇ ಮೊದಲ ಬಾರಿಗೆ ಅಪರೂಪದ ವಿದ್ಯಮಾನವೊಂದಕ್ಕೆ ಹಾಲೀ ಬಜೆಟ್ ಅಧಿವೇಶನ ಸಾಕ್ಷಿಯಾಗಲಿದೆ. ಬಜೆಟ್ ಜಂಟಿ ಅಧಿವೇಶನವನ್ನು ರಾಷ್ಟ್ರಪತಿ ದ್ರೌಪದಿ ಮರ್ಮು ಉದ್ದೇಶಿಸಿ ಮಾತನಾಡುವ ಮೂಲಕ ಆರಂಭವಾಗಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಬಾರಿಗೆ ಆಯವ್ಯಯವನ್ನು ಮಂಡಿಸಲಿದ್ದಾರೆ. ಆ ಮೂಲಕ, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ರಾಷ್ಟ್ರಪತಿಯೊಬ್ಬರು ಸದನವನ್ನು ಉದ್ದೇಶಿಸಿ ಮಾತನಾಡಿದ್ದು ಮತ್ತು ಮಹಿಳಾ ಹಣಕಾಸು ಸಚಿವೆ ಕೇಂದ್ರ ಬಜೆಟ್ ಮಂಡಿಸುವ ಅಪರೂಪದ ಸನ್ನಿವೇಶಕ್ಕೆ ದೇಶ ಸಾಕ್ಷಿಯಾಗಲಿದೆ.
ಈ ಹಿಂದೆ ಪ್ರತಿಭಾ ಪಾಟೀಲ್ 2007-2012ರ ಐದು ವರ್ಷದ ಅವಧಿಗೆ ರಾಷ್ಟ್ರಪತಿಯಾಗಿದ್ದ ವೇಳೆ ಜಸ್ವಂತ್ ಸಿಂಗ್, ಪಿ.ಚಿದಂಬರಂ, ಮನಮೋಹನ್ ಸಿಂಗ್, ಪ್ರಣವ್ ಮುಖರ್ಜಿ ಕೇಂದ್ರ ಹಣಕಾಸು ಸಚಿವರಾಗಿದ್ದರು.
ಈಗ, ದ್ರೌಪದಿ ಮರ್ಮು ಅವರು 25.07.2022 ರಂದು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಅವರು ಇದೇ ಮೊದಲ ಬಾರಿಗೆ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ನಿರ್ಮಲಾ ಸೀತಾರಾಮನ್ ನಾಲ್ಕು ಬಾರಿ ಈ ಹಿಂದೆ ಬಜೆಟ್ ಮಂಡಿಸಿದ್ದರೂ ಈ ಅವಧಿಯಲ್ಲಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರಪತಿಗಳಾಗಿದ್ದರು.