ಎಐಸಿಸಿ ಚುನಾವಣೆಯಲ್ಲಿ ಎಂಟು ಸಾವಿರ ಮತಗಳಿಂದ ಖರ್ಗೆ ಗೆಲುವು

ಎಐಸಿಸಿ ಚುನಾವಣೆಯಲ್ಲಿ ಎಂಟು ಸಾವಿರ ಮತಗಳಿಂದ ಖರ್ಗೆ ಗೆಲುವು

ವದೆಹಲಿ,ಅ.19;- ಎಐಸಿಸಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಮಾರು ಎಂಟು ಸಾವಿರ ಮತಗಳನ್ನು ಪಡೆಯುವ ಅಭೂತಪೂರ್ವ ಗೆಲುವು ದಾಖಲಿಸಿದ್ದಾರೆ. 137 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಗೆ ಇದೇ 15ರಂದು ಚುನಾವಣೆ ನಡೆದಿತ್ತು.

ದೇಶಾದ್ಯಂತ 9500ಕ್ಕೂ ಹೆಚ್ಚು ಪ್ರದೇಶ ಕಾಂಗ್ರೆಸ್‍ನ ಪ್ರತಿನಿಧಿಗಳು ಮತದಾನ ಮಾಡಿದ್ದರು.

ಇಂದು ಬೆಳಗ್ಗೆ 10.20ರಿಂದ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಮತ ಎಣಿಕೆ ಆರಂಭವಾಯಿತು. ಚುನಾವಣೆಯಲ್ಲಿ ಮಲ್ಲಿಕಾರ್ಜುನಖರ್ಗೆ ಮತ್ತು ಶಶಿತರೂರ್ ಅವರು ಸ್ರ್ಪಧಿಸಿದ್ದರು. ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ ಆರಂಭಿಕ ಹಂತದಲ್ಲೇ 8000 ಮತಗಳನ್ನು ಪಡೆದಿದ್ದರು. ಶಶಿತರೂರ್ 1072 ಮತಗಳನ್ನು ಪಡೆದರು. ಈ ಮೂಲಕ ಅತಿ ಹೆಚ್ಚು ಮತಗಳಿಸಿ ಕಾಂಗ್ರೆಸ್‍ನ 18ನೇ ಅಧ್ಯಕ್ಷರಾಗಿ ಖರ್ಗೆ ಆಯ್ಕೆಯಾಗಿದ್ದಾರೆ.

ಒಟ್ಟು ಮತದಾನದಲ್ಲಿ ಖರ್ಗೆ ಶೇ.88ರಷ್ಟು ಬೆಂಬಲ ಪಡೆದರೆ, ಶಶಿತರೂರ್ ಶೇ.12ರಷ್ಟು ಮತ ಪಡೆದಿದ್ದಾರೆ. ಖರ್ಗೆ ಸುಮಾರು 7ಸಾವಿರ ಮತಗಳ ಅಂತರದಿಂದ ಜಯ ಸಾಧಿ ಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಕರ್ನಾಟಕ, ದೆಹಲಿ ಸೇರಿದಂತೆ ಹಲವು ಭಾಗಗಳಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಮತ ಎಣಿಕೆ ಅರ್ಧದಷ್ಟು ಮುಗಿದು ಖರ್ಗೆ ಅವರು 4ಸಾವಿರಕ್ಕೂ ಹೆಚ್ಚು ಮತ ಪಡೆಯುತ್ತಿದ್ದಂತೆ ಕೈ ಕಾರ್ಯಕರ್ತರಲ್ಲಿ ಉತ್ಸಾಹ ಮುಗಿಲು ಮುಟ್ಟಿತ್ತು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಖರ್ಗೆ ಆಯ್ಕೆ ಖಚಿತ ಎಂದು ಸ್ಪಷ್ಟವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಕೂಡ ಅಭಿನಂದನೆಗಳ ಸಂದೇಶಗಳ ಸುರಿಮಳೆಗೈದರು.

ಕರ್ನಾಟಕ ರಾಜ್ಯದಿಂದ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗುತ್ತಿರುವ ಎರಡನೇ ಕನ್ನಡಿಗ ಎಂಬ ಕೀರ್ತಿಗೆ ಖರ್ಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 1968ರಿಂದ 69ರವರೆಗೆ ಕನ್ನಡಿಗರೇ ಆದ ಎಸ್.ನಿಜಲಿಂಗಪ್ಪ ಎಐಸಿಸಿಯ ಅಧ್ಯಕ್ಷರಾಗಿ ನೇಮಕವಾಗಿ ಕೆಲಸ ಮಾಡಿದ್ದರು. ಆ ಬಳಿಕ ಬಹುತೇಕ ಉತ್ತರ ಭಾರತೀಯರೇ ಪಕ್ಷದ ಅಧ್ಯಕ್ಷರಾಗಿದ್ದರು.

1998ರಿಂದ ಸೋನಿಯಾಗಾಂಧಿ ನಿರಂತರವಾಗಿ ಪಕ್ಷದ ಅಧ್ಯಕ್ಷರಾಗಿದ್ದು, 2017ರಿಂದ 19ರವರೆಗೆ ಎರಡು ವರ್ಷಗಳ ಕಾಲ ಮಾತ್ರ ರಾಹುಲ್‍ಗಾಂಧಿ ಪಕ್ಷದ ಜವಾಬ್ದಾರಿ ನಿಭಾಯಿಸಿದ್ದರು. ಸರಿಸುಮಾರು 24 ವರ್ಷಗಳ ಕಾಲ ಗಾಂಧಿ ಕುಟುಂಬದ ಹಿಡಿತದಲ್ಲಿದ್ದ ಪಕ್ಷ ಈ ಬಾರಿ ಗಾಂಧಿಯೇತರ ಕುಟುಂಬದ ಹಿಡಿತಕ್ಕೆ ಸಿಕ್ಕಿದೆ.

ಕಾಂಗ್ರೆಸ್ ವಂಶಪಾರಂಪರ್ಯ ರಾಜಕಾರಣ ಅನುಸರಿಸುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದವು. ಅದನ್ನು ತೊಡೆದು ಹಾಕಲು ಗಾಂಧಿ ಕುಟುಂಬ ಈ ಬಾರಿ ಚುನಾವಣೆಯಲ್ಲಿ ಸ್ರ್ಪಧಿಸದೆ ಹಿಂದೆ ಸರಿದಿದೆ.

ಹೀಗಾಗಿ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿತರೂರ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಖರ್ಗೆ ಅವರ ಗೆಲುವು ಖಚಿತವಾಗುತ್ತಿದ್ದಂತೆ ಶಶಿತರೂರ್ ಬಣ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ನಿಷ್ಪಕ್ಷಪಾತವಾಗಿ ಚುನಾವಣೆ ನಡೆದಿಲ್ಲ. ಅಭ್ಯರ್ಥಿಯಾಗಿದ್ದ ಶಶಿತರೂರ್ ಅವರ ತಂಡಕ್ಕೆ ಮತದಾರರ ಪಟ್ಟಿಯನ್ನೇ ನೀಡಿಲ್ಲ ಎಂದು ತರೂರ್ ಬಣದ ಸಲ್ಮಾನ್ ಸೂಜ್ ಆರೋಪಿಸಿದ್ದಾರೆ. ಸಣ್ಣಪುಟ್ಟ ಆಕ್ಷೇಪಗಳ ಹೊರತಾಗಿಯೂ ಫಲಿತಾಂಶ ಪ್ರಕಟಗೊಂಡಿದ್ದು, ಖರ್ಗೆ ಗೆಲುವು ಸಾಧಿಸಿದ್ದಾರೆ.

ನೂತನ ಅಧ್ಯಕ್ಷರಾದ ಮಲ್ಲಿಕಾರ್ಜುನ ಖೆರ್ಗ ಅವರ ಮುಂದೆ ಹಲವಾರು ಸವಾಲುಗಳು ಇವೆ. ಸಂಕಷ್ಟದಲ್ಲಿರುವ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಬಲಪಡಿಸುವುದು, ಉದಯಪುರ ಚಿಂತನ್ ಶಿಬಿರ್ ಕೈಗೊಂಡ ನಿರ್ಣಯಗಳನ್ನು ಕಡ್ಡಾಯವಾಗಿ ಜಾರಿಗೊಳಿಸುವುದು. ಒಬ್ಬರಿಗೆ ಒಂದೇ ಹುದ್ದೆ, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ನಿಯಮವನ್ನು ಪಾಲಿಸುವುದು, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿಪಕ್ಷ ಅದರಲ್ಲೂ ಕಾಂಗ್ರೆಸ್ ನಾಯಕರ ಮೇಲೆ ನಡೆಸುತ್ತಿರುವ ದಾಳಿಗೆ ತಿರುಗೇಟು ನೀಡುವುದು, ಬಿಜೆಪಿ ಹಾಗೂ ಸಂಘ ಪರಿವಾರದ ಅಬ್ಬರದ ಪ್ರಚಾರವನ್ನು ಪ್ರತಿರೋಸಿ ಕಾಂಗ್ರೆಸನ್ನು ಜನರ ನಡುವೆ ಬೆಳೆಸುವುದೂ ಸೇರಿದಂತೆ ಹಲವು ಸವಾಲುಗಳನ್ನು ನೂತನ ಅಧ್ಯಕ್ಷರು ಎದುರಿಸಬೇಕಿದೆ. ಹೀಗಾಗಿ ಸಂಕಷ್ಟದ ಕಾಲದಲ್ಲಿ ಪಕ್ಷದ ಚುಕ್ಕಾಣಿ ಹಿಡಿದಿರುವ ಖರ್ಗೆ ಅವರ ಮುಂದೆ ಹಲವಾರು ಸವಾಲುಗಳು ಇವೆ.