ಪಿಓಪಿ, ಬಣ್ಣದ ಗಣಪತಿ ಮೂರ್ತಿ ಬಳಕೆ ನಿರ್ಬಂಧ: ಪುರಾಣಿಕ
ಬಾಗಲಕೋಟೆ: ಪ್ಲಾಸ್ಟರ್ ಆಫ್ ಪ್ಯಾರಿಸ್ ಹಾಗೂ ವಿಷಯುಕ್ತ ರಾಸಾಯನಿಕ ಬಣ್ಣಗಳನ್ನು ಹೊಂದಿದ ಗಣಪತಿ ವಿಗ್ರಹಗಳು ನೀರಿನಲ್ಲಿ ವಿಸರ್ಜನೆಗೊಂಡು ನದಿ ತೊರೆಗಳು, ಕೆರೆಕಟ್ಟೆಗಳ ನೀರು ಮಾಲಿನ್ಯವಾಗುತ್ತಿರುವ ಹಿನ್ನಲೆಯಲ್ಲಿ ಪಿಓಪಿ ಮತ್ತು ಬಣ್ಣದ ಗಣಪತಿ ಮೂರ್ತಿಗಳನ್ನು ಬಳಸದಿರಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ಭಂಧಿಸಿರುವುದಾಗಿ ಪರಿಸರ ಅಧಿಕಾರಿ ಆರ್.ಎಸ್.ಪುರಾಣಿಕ ತಿಳಿಸಿದ್ದಾರೆ.
ಪ್ರಸ್ತುತ ಕೋವಿಡ್ ಸೋಂಕು ಇಡೀ ವಿಶ್ವವನ್ನು ಆವರಿಸಿದ್ದು, ಇಂತಹ ಸಂದಿಗ್ದ ಸಂದರ್ಭದಲ್ಲಿ ಮನೆ ಮನೆಗಳಲ್ಲಿ ರೋಗನಿರೋಧಕ ಶಕ್ತಿಯುಳ್ಳ ಅರಿಶಿನ ಮಿಶ್ರಿತವಾದ ಗೋಧಿ ಹಿಟ್ಟು ಅಥವಾ ರಾಗಿ ಹಿಟ್ಟಿನಿಂದ ಮಾಡಿದ ಪುಟ್ಟ ಗಣೇಶ ವಿಗ್ರಹಗಳನ್ನು ಪೂಜೆ ಮಾಡಿದಲ್ಲಿ ಕುಟುಂಬದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ವರ್ಷ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಹಾಗೂ ಕೋವಿಡ್ ನಿರೋಧಕ ವಸ್ತುಗಳನ್ನು ಉಪಯೋಗಿಸಿ ಆಚರಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವಿನೂತನ ಮಾರ್ಗಸೂಚಿಗಳನ್ನು ಹೊರಡಿಸಿದೆ ಎಂದು ತಿಳಿಸಿದ್ದಾರೆ.
ಪ್ಲಾಸ್ಟಿಕ್ ಅಲಂಕಾರಿಕ ವಸ್ತುಗಳನ್ನು ತ್ಯಜಿಸಿ ಹೂವು ಪತ್ರೆಗಳಿಂದ ಗಣಪತಿಯನ್ನು ಸಿಂಗರಿಸಲು ಬಳಸುವುದು ಹಾಗೂ ಅರಿಶಿನ ಗಣೇಶನನ್ನು ಕೂರಿಸಲು ಪೀಠವಾಗಿ ತೆಂಗಿನ ಚಿಪ್ಪಿನ ಕರಟವನ್ನು ಉಪಯೋಗಿಸಬಹುದಾಗಿದೆ. ರೋಗನಿರೋಧಕ ಪರಿಕರಣಗಳನ್ನು ಬಳಸಿ ಮನೆಯಲ್ಲಿಯೇ ಗಣೇಶನ ವಿಗ್ರಹ ಮಾಡಿ ಮನೆಯಲ್ಲೇ ವಿಸರ್ಜಿಸಿದರೆ ಸಾಮಾಜಿಕ ಅಂತರ ಕಾಪಾಡಿಕೊಂಡಂತಾಗುತ್ತದೆ. ವಿಸರ್ಜಿತ ನೀರಿನಿಂದ ಮನೆಯನ್ನು ಶುಚಿ ಮಾಡಿಕೊಂಡರೆ ಕ್ರಿಮಿನಾಶಕವಾಗಿಯೂ ಬಳಕೆಗೆ ಬರುತ್ತದೆ. ಈ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಸ್ವಯಂ ಸೇವಾ ಸಂಸ್ಥೆಗಳು, ಸಂಘ ಸಂಸ್ಥೆಗಳು, ನಿವಾಸಿ ಸಂಘಗಳ ಪ್ರತಿನಿಧಿಗಳ ಸಹಕಾರದೊಂದಿಗೆ ಈ ಬಾರಿ ವಿಶಿಷ್ಟ ರೀತಿಯಲ್ಲಿ ಗಣೇಶನನ್ನು ಪೂಜಿಸುವಲ್ಲಿ ಸಾರ್ವಜನಿಕರು ಮಂಡಳಿಯೊಂದಿಗೆ ಕೈಜೋಡಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ.
ಈ ಬಾರಿ ವಿಶೇಷವಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹತ್ತು ಲಕ್ಷ ಅರಿಶಿಣ ಗಣೇಶ ಮೂರ್ತಿಗಳನ್ನು ನಿಗದಿತ ಸಮಯದಲ್ಲಿ ನಿರ್ಮಿಸುವ ಗುರಿಯೊಂದಿಗೆ ಅಭಿಯಾನವನ್ನು ಆರಂಭಿಸಿದ್ದು, ಈ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ತಾವೆಲ್ಲವೂ ಕೈಜೋಡಿಸಬೇಕೆಂದು ವಿನಂತಿಸಿದ್ದಾರೆ. ಸೆಪ್ಟೆಂಬರ 8 ರಂದು ಬೆಳಿಗ್ಗೆ 6 ರಿಂದ ಸೆಪ್ಟೆಂಬರ 10ರ ಸಂಜೆ 6 ಗಂಟೆವರೆಗೆ ಸಾರ್ವಜನಿಕರು ತಯಾರಿಸಿದ ಅರಿಶಿಣ ಗಣೇಶನ ಛಾಯಾಚಿತ್ರವನ್ನು ಮಂಡಳಿಯ ಜಾಲತಾಣ kspcb.karnataka.gov.in, YouTube@kspcbkarnataka, facebook@kspcbofficial, Twitter@karnatakakspcb, Instagram :kspcb_officeal ಗೆ ಕಳುಹಿಸಬಹುದಾಗಿದೆ ಎಂದು ತಿಳಿಸಿದ್ದಾರೆ.