ಮನೆಯಲ್ಲೇ ಮದ್ಯ ಮಾರುತ್ತಿದ್ದ ತಂದೆ; ದಾಳಿ ಮಾಡಿದ ಪೊಲೀಸರ ಏಟು ಬಿತ್ತು ಮಗನ ಮರ್ಮಾಂಗದ ಮೇಲೆ..

ಮನೆಯಲ್ಲೇ ಮದ್ಯ ಮಾರುತ್ತಿದ್ದ ತಂದೆ; ದಾಳಿ ಮಾಡಿದ ಪೊಲೀಸರ ಏಟು ಬಿತ್ತು ಮಗನ ಮರ್ಮಾಂಗದ ಮೇಲೆ..

ಬಾಗಲಕೋಟೆ: ವ್ಯಕ್ತಿಯೊಬ್ಬ ಮನೆಯಲ್ಲೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ವಿಷಯ ತಿಳಿದ ಪೊಲೀಸರು ದಾಳಿ ನಡೆಸಿ ಥಳಿಸಿದ್ದು, ತಪ್ಪಿಸಲು ಹೋದ ಮಗನ ಮರ್ಮಾಂಗಕ್ಕೂ ಏಟು ಬಿದ್ದ ಪ್ರಕರಣ ನಡೆದಿದೆ. ಮದ್ಯ ಮಾರುತ್ತಿದ್ದ ತಂದೆ ಹಾಗೂ ಆತನ ಪುತ್ರ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹನುಮಂತ ಹೊಸಮನಿ ಹಾಗೂ ಆತನ ಪುತ್ರ ಸಂತೋಷ ಹೊಸಮನಿ ಆಸ್ಪತ್ರೆಗೆ ದಾಖಲಿಸಲ್ಪಟ್ಟವರು. ಹನುಮಂತ ಮನೆಯಲ್ಲಿ ಮದ್ಯ ಮಾರುತ್ತಿರುವ ವಿಷಯ ತಿಳಿದು ಇಂದು ದಾಳಿ ಮಾಡಿದ್ದ ಪೊಲೀಸರು ಪರಿಶೀಲನೆ ನಡೆಸಿದ್ದರು.

ಪರಿಶೀಲನೆ ವೇಳೆ ಪೊಲೀಸರು ತಂದೆಗೆ ಹೊಡೆಯುತ್ತಿದ್ದರು. ಅದನ್ನು ಬಿಡಿಸಲು ಹೋದ ನನಗೆ ಮರ್ಮಾಂಗದ ಮೇಲೆ ಲಾಠಿ ಏಟು ಬಿದ್ದಿದೆ ಎಂದು 12 ವರ್ಷದ ಸಂತೋಷ ಹೇಳಿಕೊಂಡಿದ್ದಾನೆ. ತಂದೆ-ಮಗ ಇಬ್ಬರೂ ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಾವಳಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಜಮಖಂಡಿ ಅಬಕಾರಿ ಪೊಲೀಸರ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.