ಬೆಂಗಳೂರಲ್ಲಿ ಇನ್ನು ನಾಯಿ ಸಾಕೋಕೆ ಲೈಸೆನ್ಸ್ ಬೇಕು!
ಬೆಂಗಳೂರು, ನವೆಂಬರ್ 10; ಬೀದಿನಾಯಿಗಳ ವಿಚಾರಕ್ಕೆ ಸಂಬಂಧಿಸಿದಂತೆಬೆಂಗಳೂರುಆಗಾಗ ಸುದ್ದಿಯಾಗುತ್ತದೆ. ಈಗ ಸಾಕುನಾಯಿಗಳ ವಿಚಾರಕ್ಕೆ ಸುದ್ದಿಯಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಾಯಿಗಳನ್ನು ಸಾಕಲು ಲೈಸೆನ್ಸ್ ಕಡ್ಡಾಯಗೊಳಿಸಲಿದೆ ಮತ್ತು ನಾಯಿಯ ಮಾಲೀಕರು ಸಹ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕಿದೆ. ಈ ನಿಯಮದ ಕರಡು ಪ್ರತಿ ಸಿದ್ಧವಾಗಿದೆ.
ಬಿಬಿಎಂಪಿ ಕಾಯ್ದೆಗಳು 2020ರ ಅನ್ವಯ ನಾಯಿ ಸಾಕಲು ಲೈಸೆನ್ಸ್, ನಾಯಿ ಮಾಲೀಕರ ನೋಂದಣಿ ನಿಯಮ ಜಾರಿಗೊಳಿಸಲಾಗುತ್ತಿದೆ. ಲೈಸೆನ್ಸ್ ಪಡೆದಿರುವ ನಾಯಿಗಳಿಗೆ ಮೈಕ್ರೋ ಚಿಪ್ ಸಹ ಅಳವಡಿಕೆ ಮಾಡಲಾಗುತ್ತದೆ.
ಈಗಾಗಲೇ ಹೊಸ ನಿಯಮದ ಕರಡು ಸಿದ್ಧವಾಗಿದೆ. ಇದನ್ನು 15 ದಿನಗಳಲ್ಲಿ ಪ್ರಕಟಿಸಲಾಗುತ್ತದೆ. ಜನರು ಆಕ್ಷೇಪಣೆಗಳನ್ನು ಸಲ್ಲಿಕೆ ಮಾಡಲು 30 ದಿನದ ಕಾಲಾವಕಾಶ ನೀಡಲಾಗುತ್ತದೆ. ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ ಹೊಸ ನಿಯಮ ಜಾರಿಗೊಳಿಸಲು ಬಿಬಿಎಂಪಿ ಸಿದ್ಧತೆ ನಡೆಸಿದೆ.
2014ರಲ್ಲಿ ಮೊದಲ ಬಾರಿಗೆ ಸಾಕುನಾಯಿಗಳ ಲೈಸೆನ್ಸ್ ಪಡೆಯುವ ಪ್ರಸ್ತಾಪ ಮುಂದಿಡಲಾಗಿತ್ತು. 2017ರಿಂದಲೇ ನೋಂದಣಿ ಕಾರ್ಯ ನಡೆಸಲಾಗುತ್ತಿದೆ. ನಗರದಲ್ಲಿ ಸುಮಾರು 80 ಸಾವಿರ ಸಾಕು ನಾಯಿಗಳು ಇರಬಹುದು ಎಂದು ಅಂದಾಜಿಸಲಾಗಿದೆ. ಬಿಬಿಎಂಪಿ ಕಾಯ್ದೆ 2020ರ ಅನ್ವಯ ನಾಯಿ ಸಾಕಲು ಲೈಸೆನ್ಸ್ ನೀಡಲಾಗುತ್ತದೆ.
ನಗರದ ವಿವಿಧ ಭಾಗಿದಾರರ ಬಳಿ ಈ ಕುರಿತು 5 ಬಾರಿ ಅಭಿಪ್ರಾಯ ಸಂಗ್ರಹಣೆ ಮಾಡಲಾಗಿದೆ. ಬಳಿಕ ಕಾನೂನಿನ ಕರಡು ತಯಾರು ಮಾಡಲಾಗಿದೆ. 15 ದಿನದಲ್ಲಿ ಕರಡು ಅಂತಿಮಗೊಳಿಸಿ ಆಕ್ಷೇಪಣೆಗಳಿಗಾಗಿ ಪ್ರಕಟಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನಾಯಿಗಳನ್ನು ಸಾಕಲು ಶುಲ್ಕ ಕಟ್ಟಬೇಕು. ಲೈಸೆನ್ಸ್ ನೀಡಿ, ನಾಯಿಗಳಿಗೆ ಮೈಕ್ರೋ ಚಿಪ್ ನೀಡಲಾಗುತ್ತದೆ. ಯಾವ ಜಾತಿಯ ನಾಯಿ ಎಂದು ಮಾಲೀಕರು ನೋಂದಣಿ ಮಾಡಿಸಬೇಕು. ನಿಯಮ ಜಾರಿಗೆ ಬಂದ ಮೊದಲ ವರ್ಷದಲ್ಲಿ ಲೈಸೆನ್ಸ್ ನವೀಕರಣ ಸಹ ಮಾಡಲಾಗುತ್ತದೆ. ಲೈಸೆನ್ಸ್ ಪಡೆದ ನಾಯಿಗೆ ನೋಂದಣಿ ಸಂಖ್ಯೆ ಸಹ ನೀಡಲಾಗುತ್ತದೆ.
ಲೈಸೆನ್ಸ್ ಪಡೆದ ಒಂದು ವರ್ಷದ ಬಳಿಕ ಮನೆಗಳಲ್ಲಿ ಮೂರು, ಅಪಾರ್ಟ್‌ಮೆಂಟ್‌ನಲ್ಲಿ ಒಂದು ನಾಯಿ ಸಾಕಲು ಅವಕಾಶ ನೀಡಲಾಗುತ್ತದೆ. ನಾಯಿಗಳು ಜನಸಾಮಾನ್ಯರ ಮೇಲೆ ದಾಳಿ ಮಾಡದಂತೆ ಮುಂಜಾಗ್ರತೆ ಕೈಗೊಳ್ಳುತ್ತೇವೆ ಎಂದು ನಾಯಿಗಳ ಮಾಲೀಕರು ಪ್ರಮಾಣ ಪತ್ರ ಸಲ್ಲಿಸಬೇಕು.
ಪ್ರಮುಖವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಾಯಿಗಳು ಮಲ, ಮೂತ್ರ ಮಾಡಿದರೆ ಮಾಲೀಕರು ಸ್ವಚ್ಛಗೊಳಿಸಬೇಕು. ಹೊಸ ನಿಯಮಗಳ ಪ್ರಕಾರ ಕೆಲವು ತಳಿಗಳ ನಾಯಿಗಳನ್ನು ಸಾಕಲು ಅನುಮತಿ ನೀಡುವ ಸಾಧ್ಯತೆ ಕಡಿಮೆ ಇದೆ. ನಾಯಿಗಳ ನೋಂದಣಿ ಮಾಡಿಸದಿದ್ದರೆ ರೂ. 1000 ದಂಡ ಹಾಕಲಾಗುತ್ತದೆ. ನೋಂದಣಿ ಮಾಡಿಸುವ ತನಕ ಪ್ರತಿ ತಿಂಗಳು 300 ರೂ. ದಂಡ ಕಟ್ಟಬೇಕು.
ನೋಂದಣಿ ಸಂಖ್ಯೆ ನಾಯಿ ಸಾಕಲು ಲೈಸೆನ್ಸ್ ಪಡೆದು, ಮಾಲೀಕರ ನೋಂದಣಿಯಾದ ಬಳಿಕ ನಾಯಿಗೆ 11 ಸಂಖ್ಯೆಯ ನೋಂದಣಿ ಸಂಖ್ಯೆ ಸಿಗಲಿದೆ. ಅಲ್ಲದೇ ಮೆಕ್ರೋ ಚಿಪ್‌ನಲ್ಲಿ ನಾಯಿಯ ತಳಿ, ಮಾಲೀಕರ ವಿಳಾಸ, ಲಸಿಕೆ ಪಡೆದ ವಿವರ ಲಭ್ಯವಾಗಲಿದೆ. ನಾಯಿ ಕಳುವಾದ ಸಮಯದಲ್ಲಿ ಇದು ಸಹಾಯಕ್ಕೆ ಬರಲಿದೆ.
ಸಾರ್ವಜನಿಕ ಸ್ಥಳದಲ್ಲಿ ಎಲ್ಲೆಂದರಲ್ಲಿ ನಾಯಿಗಳು ಮಲ, ಮೂತ್ರ ಮಾಡಿದರೆ ಮಾಲೀಕರು ಅದನ್ನು ಸ್ವಚ್ಛಗೊಳಿಸಬೇಕು ಇಲ್ಲವಾದಲ್ಲಿ 500 ರೂ. ದಂಡ ಹಾಕಲಾಗುತ್ತದೆ. ಇದು ಪದೇ ಪದೇ ಪುನಾರವರ್ತನೆಯಾದರೆ 100 ರೂ. ದಂಡ ಕಟ್ಟಬೇಕು. ಗಾಯಗೊಂಡ, ರಕ್ಷಣೆ ಮಾಡಿದ ನಾಯಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ. ಇದಕ್ಕಾಗಿ ಬಿಬಿಎಂಪಿ ಪಶು ವೈದ್ಯರಿಂದ ಪ್ರಮಾಣ ಪತ್ರ ಪಡೆಯಬೇಕು.
ಬೆಂಗಳೂರು ನಗರದಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳನ್ನು ಸಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಾವಿರಾರು ರೂಪಾಯಿ ನೀಡಿ ದೇಶ-ವಿದೇಶದ ತಳಿಯ ವಿವಿಧ ನಾಯಿಗಳನ್ನು ತಂದು ಸಾಕಲಾಗುತ್ತಿದೆ. ಅವುಗಳನ್ನು ವಾಕಿಂಗ್ ಕರೆದುಕೊಂಡು ಹೋಗುವುದು. ಎಲ್ಲೆಂದರಲ್ಲಿ ಮಲ-ಮೂತ್ರ ಮಾಡಿಸುವುದು ನಡೆದಿದೆ.
ಈಗಾಗಲೇ ವಿದೇಶಗಳಲ್ಲಿ ಎಲ್ಲೆಂದರಲ್ಲಿ ಮಲ-ಮೂತ್ರ ಮಾಡಿಸಿದರೆ ಮಾಲೀಕರೇ ಸ್ವಚ್ಛಗೊಳಿಸಬೇಕು ಎಂಬ ನಿಯಮಗಳನ್ನು ತರಲಾಗಿದೆ. ಇದೇ ಮಾದರಿಯಲ್ಲಿ ಬೆಂಗಳೂರು ನಗರದಲ್ಲಿ ನಿಯಮ ಜಾರಿಗೊಳಿಸಲು ಚಿಂತನೆ ನಡೆದಿದೆ.