ಬಿಜೆಪಿ ಸಭೆಗೆ ಬರುವುದಿಲ್ಲವೆಂದು ಕಡ್ಡಿಮುರಿದಂತೆ ಹೇಳಿದ ಎಚ್. ವಿಶ್ವನಾಥ್.!

ಬಿಜೆಪಿ ಸಭೆಗೆ ಬರುವುದಿಲ್ಲವೆಂದು ಕಡ್ಡಿಮುರಿದಂತೆ ಹೇಳಿದ ಎಚ್. ವಿಶ್ವನಾಥ್.!

ಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣಕರ್ತರಾಗಿದ್ದವರ ಪೈಕಿ ಎಚ್. ವಿಶ್ವನಾಥ್ ಕೂಡ ಒಬ್ಬರು. ಆ ಬಳಿಕ ಬಿಜೆಪಿ ಸೇರ್ಪಡೆಗೊಂಡು ವಿಧಾನಸಭಾ ಚುನಾವಣೆಗೆ ಕಣಕ್ಕಿಳಿದರೂ ಸಹ ಅವರು ಪರಾಭವಗೊಂಡಿದ್ದರು. ನಂತರ ವಿಶ್ವನಾಥ್ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು.

ಆದರೆ ಕಳೆದ ಕೆಲವು ದಿನಗಳಿಂದ ಎಚ್. ವಿಶ್ವನಾಥ್ ಬಿಜೆಪಿ ನಾಯಕರ ವಿರುದ್ಧ ನಿರಂತರ ಟೀಕೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಊಹಾಪೂಹ ಕೇಳಿ ಬರುತ್ತಿತ್ತು.

ಇದೀಗ ವಿಶ್ವನಾಥ್ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ತಮ್ಮನ್ನು ಬಿಜೆಪಿ ಸಭೆಗೆ ಆಹ್ವಾನಿಸಲು ಬಂದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಪ್ತ ಸಿಬ್ಬಂದಿಗೆ ನಾನು ಈ ಸಭೆಗೆ ಬರಲಾರೆ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದರೆ ನಾನು ವಿಧಾನ ಪರಿಷತ್ ಸಭಾಪತಿ ಚುನಾವಣೆಯಲ್ಲಿ ಬಸವರಾಜ ಹೊರಟ್ಟಿ ಅವರಿಗೆ ಮತ ನೀಡುತ್ತೇನೆ ಎಂದು ಹೇಳಿದ್ದಾರೆ.

ವಿಶ್ವನಾಥ್ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ವಿಧಾನ ಪರಿಷತ್ ಗೆ ನಾಮನಿರ್ದೇಶನಗೊಂಡಿದ್ದು, ಹೀಗಾಗಿ ಯಾವುದೇ ಪಕ್ಷದ ಜೊತೆ ಗುರುತಿಸಿಕೊಳ್ಳಲು ಸ್ವತಂತ್ರನಿದ್ದೇನೆ ಎಂಬ ನಿಲುವು ಅವರದ್ದಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಧಿವೇಶನದ ಸಂದರ್ಭದಲ್ಲಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟುಮಾಡುವ ಸಾಧ್ಯತೆಯೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.