ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ, ಬಂದ್ ಕೈಬಿಡಿ: ಸಚಿವ ಸುನಿಲ್ ಕುಮಾರ್

ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ, ಬಂದ್ ಕೈಬಿಡಿ: ಸಚಿವ ಸುನಿಲ್ ಕುಮಾರ್

ಚಿತ್ರದುರ್ಗ: ಕರ್ನಾಟಕ ಬಂದ್ ಮಾಡುವ ಅನಿವಾರ್ಯತೆಯಿಲ್ಲ. ದುರ್ಷ್ಕರ್ಮಿಗಳ ವಿರುದ್ದ ಸರ್ಕಾರ ಕ್ರಮಕೈಗೊಂಡಿದೆ. ಪುಂಡಾಟಿಕೆಗಳನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ.

ನಮ್ಮ ಸಾಹಿತ್ಯ, ಭಾಷೆ, ಸಂಸ್ಕೃತಿ ಬಗ್ಗೆ ಸರ್ಕಾರ ಪ್ರಥಮ ಆದ್ಯತೆ ನೀಡಿದೆ. ಇದರ ವಿರುದ್ಧ ಮಾತನಾಡುವವರ ಬಗ್ಗೆ ಸರ್ಕಾರ ಕ್ರಮವಹಿಸುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರವು ಕನ್ನಡ ಸಂಘಟನೆ, ಸಂಸ್ಥೆಗಳ ಜೊತೆ ನಿರಂತರ ಸಂಪರ್ಕದಲ್ಲಿದೆ. ಪ್ರತಿ ಬಾರಿ ಇಂಥ ಘಟನೆಯಾದಾಗ ಬಂದ್ ಮಾಡುವುದು ಸರಿಯಲ್ಲ. ಬಂದ್ ಕೈಬಿಡಿ ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತಾಂತರ ಕಾಯ್ದೆ ವಾಪಸ್ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯನವರು ಸರ್ಕಾರ ಬರುವ ಭ್ರಮೆಯಲ್ಲಿದ್ದಾರೆ. ಮತಾಂತರ ಕಾಯ್ದೆ, ಗೋ ಹತ್ಯೆ ಕಾನೂನು, ಟಿಪ್ಪು ಜಯಂತಿ ಕುರಿತು ಹೇಳುತ್ತಿದ್ದಾರೆ. ಇದು ರಾಜ್ಯದ ಜನರಿಗೆ ಯಾವ ಸಂದೇಶ ನೀಡುತ್ತಿದೆ? ಓಬವ್ವ ಜಯಂತಿ ಮಾಡುವ ಬೊಮ್ಮಾಯಿ ಬೇಕೋ? ಟಿಪ್ಪು ಜಯಂತಿ ಮಾಡುವ ಸಿದ್ದರಾಮಯ್ಯ ಬೇಕೋ? ಇದೆಲ್ಲವನ್ನೂ ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದರು.

ಆಸೆ, ಆಮಿಷವೊಡ್ಡಿ ಮತಾಂತರ ಮಾಡಬಾರದು ಎಂದು ಕಾನೂನಿನಲ್ಲಿದೆ. ಈ ಕಾನೂನಿನಲ್ಲಿ ತಪ್ಪೇನಿದೆ. ಸಿದ್ದರಾಮಯ್ಯನವರು ಕೆಟ್ಟ ಸಂದೇಶ ಕೊಡುತ್ತಿದ್ದಾರೆ. ಟಿಪ್ಪು ಜಯಂತಿ, ಮತಾಂತರ ಕಾಯ್ದೆ ತರುವೆ ಎಂದು ಪ್ರತ್ಯೇಕ ಸಂದೇಶ ನೀಡುತ್ತಾರೆ. ನಾವು ಇದನ್ನು ದೊಡ್ಡ ಪ್ರಮಾಣದಲ್ಲಿ ಎದುರಿಸುತ್ತೇವೆ, ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದು ಸಚಿವ ಸುನಿಲ್ ಕುಮಾರ್ ಹೇಳಿದರು.

ಸಿಎಂ ಬದಲಾವಣೆ ವಿಚಾರ ನೂರಕ್ಕೆ ನೂರು ಊಹಾಪೋಹ. ಮುಂದಿನ ಚುನಾವಣೆಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಎದುರಿಸುತ್ತೇವೆ. ಅಮಿತ್ ಶಾ ಅವರು ಈ ಹಿಂದೆ ದಾವಣಗೆರೆಗೆ ಬಂದಾಗ ಸ್ಪಷ್ಟಪಡಿಸಿದ್ದಾರೆ. ನಿನ್ನೆ ಅರುಣ್ ಸಿಂಗ್ ಅವರು ಕೂಡಾ ಹೇಳಿದ್ದಾರೆ. ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವರು ಹೇಳಿದರು.