ಸಿ. ಪಿ. ಯೋಗೀಶ್ವರ್ ಇನ್ನೂ ಬಿಜೆಪಿಯಲ್ಲೇ ಇದ್ದಾರಾ?

ಸಿ. ಪಿ. ಯೋಗೀಶ್ವರ್ ಇನ್ನೂ ಬಿಜೆಪಿಯಲ್ಲೇ ಇದ್ದಾರಾ?

ರಾಮನಗರ, ಡಿಸೆಂಬರ್ 07; "ಸಿ. ಪಿ. ಯೋಗೀಶ್ವರ್ ಇನ್ನು ಬಿಜೆಪಿಯಲ್ಲಿಯೇ ಇದ್ದಾರೆ ಎಂದುಕೊಂಡಿದ್ದೇನೆ. ಮೊದಲು ಅವರು ಆತ್ಮಾವಲೋಕನ ಮಾಡಿಕೊಳ್ಳಲಿ" ಎಂದು ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದವಿಧಾನ ಪರಿಷತ್ಚುನಾವಣೆಯ ಹಿನ್ನಲೆಯಲ್ಲಿ ರಾಮನಗರದ ಮಂಜುನಾಥ ಕಲ್ಯಾಣ ಪಂಟಪದಲ್ಲಿ ಜೆಡಿಎಸ್ ಅಭ್ಯರ್ಥಿ ರಮೇಶ್ ಗೌಡ ಪರ ನಡೆದ ಪ್ರಚಾರ ಸಭೆಯ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.

ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೀಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, "ಬಿಜೆಪಿಯಲ್ಲೇ ಇದ್ದುಕೊಂಡು ಒಳಗೊಳಗೆ ಯಾವ ತಂತ್ರ ಮಾಡುತ್ತಿದ್ದಾರೆ ಅನ್ನೋದನ್ನ ಅವರು ಅವರಿಗೇ ಪ್ರಶ್ನೆ ಮಾಡಿಕೊಳ್ಳಲಿ" ಎಂದರು.

ಆಮಿಷಗಳಿಗೆ ಬಲಿಯಾಗಲ್ಲ "ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಆಸೆ, ಆಮಿಷಗಳಿಗೆ ಬಲಿಯಾಗುವುದಿಲ್ಲ‌ ಅಂತಾ ಭ್ರಮೆಯಲ್ಲಿ ಕಾಂಗ್ರಸ್‌ನವರು ಇದ್ದರೆ ಅದರಿಂದ ಹೊರಗೆ ಬರಲಿ" ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದರು.

"ನಮ್ಮ ಮುಖಂಡರು ಹಾಗೂ ಕಾರ್ಯಕರ್ತರು ಕಳೆದ 25-30 ವರ್ಷಗಳಿಂದ ಪಕ್ಷ ಕಟ್ಟಿ ಬೆಳೆಸಿದ್ದಾರೆ. ನಮ್ಮಲ್ಲಿ ಪಕ್ಷ ನಿಷ್ಠೆ, ಪ್ರಾಮಾಣಿಕ ಮುಖಂಡರಿದ್ದಾರೆ. ಕಾಂಗ್ರೆಸ್ ಪಕ್ಷದವರು ಭ್ರಮೆಯಲ್ಲಿ ಇದ್ದಾರೆ. ಮುಖಂಡರನ್ನು ಸೆಳೆಯುವ ಭ್ರಮೆಯಿಂದ ಹೊರಗೆ ಬರಲಿ. ಸುಲಭವಾಗಿ ನಮ್ಮ ಮುಖಂಡರನ್ನು ಸೆಳೆಯಲು ಸಾಧ್ಯವಿಲ್ಲ" ಎಂದು ನಿಖಿಲ್ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ನಿಖಿಲ್ ಕುಮಾರಸ್ವಾಮಿ, "ನನಗೆ ಮಂಡ್ಯ ಜಿಲ್ಲೆಯ ಜವಾಬ್ದಾರಿ ನೀಡಿದ್ದಾರೆ. ನಾನು ಈಗಾಗಲೇ 7 ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲ್ಲಲಿದ್ದಾರೆ" ಎಂದರು.

"ಇಂದು ರಾಮನಗರ ಕ್ಷೇತ್ರದಲ್ಲಿ ಸಭೆ ನಡೆಸಿದ್ದೇವೆ, ಚುನಾಯಿತ ಪ್ರತಿನಿಧಿಗಳ ಸಭೆ ಯಶಸ್ವಿಯಾಗಿ ನಡೆದಿದೆ. ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಸಭೆ ಯಶಸ್ವಿಯಾಗಿದೆ. ಬೆಂಗಳೂರು ಗ್ರಾಮಾಂತರ ವಿಧಾನ ಪರಿಷತ್ ಕ್ಷೇತ್ರದಲ್ಲೂ ನಮ್ಮ ಅಭ್ಯರ್ಥಿ ಜಯಗಳಿಸುತ್ತಾರೆ" ಎಂದು ಭವಿಷ್ಯ ನಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, "ಮೈತ್ರಿ ವಿಚಾರವಾಗಿ ಪಕ್ಷದ ನಾಯಕರು ಮಾತನಾಡುತ್ತಾರೆ. ನಮ್ಮ ನಾಯಕರು, ಮಾಜಿ ಸಿಎಂ ಎಚ್‌. ಡಿ. ಕುಮಾಸ್ವಮಿ ಈ ಕುರಿತು ನಿರ್ಧರಿಸುತ್ತಾರೆ" ಎಂದರು.

ಅಭಿವೃದ್ಧಿಗೆ ಜನ ಮನ್ನಣೆ ನೀಡುತ್ತಾರೆ "ರಾಮನಗರ ಜಿಲ್ಲೆಯ ಜನರು ಕುಮಾರಸ್ವಾಮಿ ಅವರನ್ನು ಬೆಳೆಸಿದ್ದಾರೆ, ಅಷ್ಟು ಸುಲಭವಾಗಿ ಜನ ಅವರ ಕೈ ಬಿಡೋದಿಲ್ಲ, ಕುಮಾರಸ್ವಾಮಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾಮನಗರ ಜಿಲ್ಲೆಯನ್ನಾಗಿ ಮಾಡಿದ್ದು ಅವರು ಜನರಿಗೆ ಅದು ಗೊತ್ತಿದೆ" ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

‌‌‌

"ನಾನು ಜನವರಿ ತಿಂಗಳಿನಲ್ಲಿ ರಾಮನಗರ ಕ್ಷೇತ್ರದ ಪ್ರವಾಸ ಮಾಡುತ್ತೇನೆ. ಪ್ರವಾಸದ ವೇಳೆ ಕುಮಾರಸ್ವಾಮಿರವರ ಅಭಿವೃದ್ಧಿ ಕಾರ್ಯಗಳನ್ನು ಪ್ರಚಾರ ಮಾಡುತ್ತೇನೆ. ಪ್ರತಿ ಗ್ರಾಮಕ್ಕೂ ತೆರಳಿ ಮತದಾರರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ತಿಳಿದು ಅವುಗಳನ್ನು ಪರಿಹರಿಸಲು ಶ್ರಮಿಸುತ್ತೇನೆ" ಎಂದು ಹೇಳಿದರು.

ಅನಿತಾ ಕುಮಾರಸ್ವಾಮಿ ಪ್ರಚಾರ ಚುನಾವಣೆ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಮನಗರದ ಶಾಸಕಿ ಅನಿತಾ ಕುಮಾರಸ್ವಾಮಿ, "ಇಲ್ಲಿ ಎಚ್. ಎಂ. ರಮೇಶ್ ಗೌಡ ಅಭ್ಯರ್ಥಿ ಅಲ್ಲ, ಬದಲಿಗೆ ನಾನು, ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ಅಭ್ಯರ್ಥಿ ಎಂದು ತಿಳಿದು ಮತ ನೀಡುವಂತೆ" ಮನವಿ ಮಾಡಿದರು.

"ಜೆಡಿಎಸ್ ಅಭ್ಯರ್ಥಿ ಯಾರೇ ಆಗಿದ್ದರೂ ಅವರ ಗೆಲವಿಗೆ ತಾವುಗಳು ಶ್ರಮಿಸಬೇಕು. ಆ ಮೂಲಕ ನಮ್ಮ ಅಭ್ಯರ್ಥಿಯ ಗೆಲುವಿಗೆ ಕಾರಣೀಭೂತರಾಗಬೇಕಿದೆ. ಇನ್ನು ಮುಂಬರುವ ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಈ ಚುನಾವಣೆ ಮಹತ್ವ ಪಡೆದುಕೊಂಡಿದ್ದು, ವೈಯಕ್ತಿಕವಾಗಿ ತಾವುಗಳು ತಮ್ಮ ಮತದ ಜತೆಗೆ ಬೇರೆ ಪಕ್ಷದ ಮತವನ್ನು ಸೆಳೆದು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ" ಕರೆ ನೀಡಿದರು.

"‌ನಿಮ್ಮ ಸಹಕಾರ ಹಾಗೂ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಮುಂದೆಯೂ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ. ಪಕ್ಷ ಸಂಘಟನೆಯನ್ನು ಮತ್ತಷ್ಟು ಸದೃಢಗೊಳಿಸಲು ಯುವ ನಾಯಕ ನಿಖಿಲ್ ಜತೆ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದಕ್ಕೆ ರೂಪರೇಷೆ ಸಿದ್ಧಪಡಿಸಲಾಗುವುದು" ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ತಿಳಿಸಿದರು.