ತಲೆ ಚಚ್ಚಿಕೊಂಡು ಕಾರು ಚಾಲಕನ ವಿರುದ್ಧ ಗರಂ ಆದ ಶಾಸಕಿ ಅನಿತಾ ಕುಮಾರಸ್ವಾಮಿ

ತಲೆ ಚಚ್ಚಿಕೊಂಡು ಕಾರು ಚಾಲಕನ ವಿರುದ್ಧ ಗರಂ ಆದ ಶಾಸಕಿ ಅನಿತಾ ಕುಮಾರಸ್ವಾಮಿ

ರಾಮನಗರ: ತಮ್ಮ ಕಾರು ಚಾಲಕನ ವಿರುದ್ಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಗರಂ ಆದ ಘಟನೆ ಇಂದು ರಾಮನಗರದ ಐಜೂರು ವೃತ್ತದಲ್ಲಿ ನಡೆದಿದೆ.

ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಚಳುವಳಿಗೆ ವರ್ಷ ತುಂಬಿದ ಹಿನ್ನಲೆಯಲ್ಲಿ ಇಂದು ರೈತರು ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು ಪ್ರತಿಭಟನೆ ಮಾಡುತ್ತಿದ್ದಾರೆ.

ಈ ವೇಳೆ ಐಜೂರು ವೃತ್ತದಲ್ಲಿ ಅನಿತಾ ಕುಮಾರಸ್ವಾಮಿ ಅವರ ಕಾರು ಪ್ರತಿಭಟನೆಯ ಮಧ್ಯೆ ನುಗ್ಗಿತು.

ರೈತರ ಪ್ರತಿಭಟನೆ ಕಂಡು ಅನಿತಾ ಕುಮಾರಸ್ವಾಮಿ ಮೊದಲೇ ತಬ್ಬಿಬ್ಬಾಗಿದ್ದರು. ಇತ್ತ ಚಾಲಕ ಪ್ರತಿಭಟನೆ ನಡುವೆಯೇ ಕಾರು ನುಗ್ಗಿಸಿದ್ದರಿಂದ ಚಾಲಕನ ವಿರುದ್ಧ ಗರಂ ಆದ ಅನಿತಾ ಕುಮಾರಸ್ವಾಮಿ, ಇಲ್ಲಿ ಹೋಗೋದು ಬೇಡ ಎಂದು ತಲೆ ಚೆಚ್ಚಿಕೊಂಡರು. ಆದರೂ ರೈತರ ಮಧ್ಯೆಯೇ ಚಾಲಕ ವಾಹನ ಚಲಾಯಿಸಿಕೊಂಡು ಹೋದರು. ಈ ವೇಳೆ ಪ್ರತಿಭಟನಾ ನಿರತರು ನೀವು ಮಾಡಿದ್ದು ತಪ್ಪು ಮೇಡಂ ಎಂದು ಘೋಷಣೆ ಕೂಗಿದರು.

ರೈತರಿಂದ ಬೆಂಗಳೂರು-ಮೈಸೂರು ಹೆದ್ದಾರಿ ತಡೆ ಹಿನ್ನಲೆಯಲ್ಲಿ ರೇಷ್ಮೆ ನಾಡಿನಲ್ಲಿ ಟ್ರಾಫಿಕ್​ ಜಾಮ್​ ಬಿಸಿ ತಟ್ಟಿತು. ಬೆಂ-ಮೈ ಕಡೆ ತೆರಳವ ವಾಹನಗಳಿಗೆ ಪೊಲೀಸರು ಪರ್ಯಾಯ ಮಾರ್ಗ ಮಾಡಿದ್ದು, ಐಜೂರು ಸರ್ಕಲ್​ನಿಂದ ಕನಕಪುರ ಮಾರ್ಗವಾಗಿ ಮೈಸೂರಿಗೆ ತೆರಳಲು ಬದಲಿ ವ್ಯವಸ್ಥೆ ಮಾಡಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದ ರೀತಿ ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿ ತಡೆ ವೇಳೆ ಅಹಿತರಕರ ಘಟನೆ ನಡೆಯದಂತೆ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.