ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಪತ್ನಿಯ ಹುಟ್ಟುಹಬ್ಬ ಆಚರಿಸಿದ ಸಚಿವ ಯೋಗೇಶ್ವರ್: ಕ್ರಮಕ್ಕೆ ಒತ್ತಾಯ
ಚನ್ನಪಟ್ಟಣ: ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮ ಪತ್ನಿ ಜನ್ಮ ದಿನಾಚರಣೆಯಲ್ಲಿ ಕೊರೋನಾ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.
ಚನ್ನಪಟ್ಟಣದ ಮಹದೇಶ್ವರನಗರದ ಬಳಿಯ ಮಹದೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಸ್ವತಃ ಮಾಸ್ಕ್ ಧರಿಸದೆ, ಅಂತರ ಕಾಪಾಡಿಕೊಳ್ಳದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಯೋಗೇಶ್ವರ್ ಅವರ ಪತ್ನಿ ಶೀಲಾ ಸಹ ಮಾಸ್ಕ್ ಧರಿಸಿಲ್ಲ. ಹಾಗೆಯೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಚನ್ನಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ ಸೇರಿದಂತೆ ಯಾವ ಮುಖಂಡರೂ ಮಾಸ್ಕ್ ಧರಿಸಿಲ್ಲ. ಅಂತರ ಕಾಪಾಡಿಕೊಂಡಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಇಡೀ ಕಾರ್ಯಕ್ರಮದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಸ್ವತಃ ಸಚಿವರಾಗಿದ್ದುಕೊಂಡು ಕೊರೋನಾ ನಿಯಮ ಉಲ್ಲಂಘನೆ ಮಾಡಿರುವ ಯೋಗೇಶ್ವರ್ ಕ್ರಮ ತಾಲ್ಲೂಕಿನಲ್ಲಿ ಟೀಕೆಗೆ ಗುರಿಯಾಗಿದೆ.