ಬೆಂಗಳೂರು-ಮೈಸೂರು ಹೆದ್ದಾರಿ ಮೇಲೆ ಟೊಮೆಟೊ ಸುರಿದ ರೈತರು
ರಾಮನಗರ, ಜುಲೈ 12; ಟೊಮೆಟೊ ಬೆಳೆಗೆ ಸೂಕ್ತ ಬೆಲೆ ಸಿಗದ ಕಾರಣ ಮನನೊಂದ ರೈತರು ಸಮಾರು 1 ಟನ್ ಟೊಮೆಟೊವನ್ನು ಬೆಂಗಳೂರು-ಮೈಸೂರು ಹೆದ್ದಾರಿ ಮೇಲೆ ಸುರಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ತಮ್ಮ ಆಕ್ರೋಶವನ್ನು ಹೊರಹಾಕಿದ ಘಟನೆ ರಾಮನಗರದಲ್ಲಿ ನಡೆದಿದೆ.
1 ಕೆಜಿ ಟೊಮೆಟೊ ಕೇವಲ 3 ರೂ.ಗೆ ಮಾರಾಟವಾದ ಹಿನ್ನಲೆಯಲ್ಲಿ ರಾಮನಗರದ ಎಪಿಎಂಸಿ ಮುಂಭಾಗದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ರೈತರು 1 ಟನ್ ಟೊಮೆಟೊವನ್ನು ಸೋಮವಾರ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರ ಗ್ರಾಮದ ರೈತ ಕಳೆದ 5 ದಿನಗಳ ಹಿಂದೆ ರಾಮನಗರ ಎಪಿಎಂಸಿ ಮಾರುಕಟ್ಟೆಗೆ ತಾವು ಬೆಳೆದಿದ್ದ ಟೊಮೆಟೊ ತಂದಿದ್ದರು. ಆದರೆ ಐದು ದಿನಗಳಿಂದ ಯಾರೂ ಸಹ ಬೆಳೆ ಖರೀದಿ ಮಾಡಿಲ್ಲ.
ಸೋಮವಾರ ಕೆಜಿ ಟೊಮೆಟೊವನ್ನು 3 ರೂಪಾಯಿಗೆ ವರ್ತಕರು ಕೇಳಿದ್ದರಿಂದ ರೈತರು ಆಕ್ರೋಶಗೊಂಡರು. ಇಷ್ಟು ಕಡಿಮೆ ದರಕ್ಕೆ ಮಾರಾಟ ಮಾಡುವುದಿಲ್ಲ ಎಂದು ಟೊಮೆಟೊವನ್ನು ತಂದು ರಾಷ್ಟ್ರೀಯ ಹೆದ್ದಾರಿಗೆ ಸುರಿದು ಪ್ರತಿಭಟಿಸಿದರು.
"ಟೊಮೆಟೊ ಬೆಳೆಯಲು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದೇನೆ. 3 ರೂ. ಗೆ ಮಾರಾಟವಾದರೆ ಆದಾಯವಿರಲಿ, ಕಟಾವಿಗೆ ಖರ್ಚಾದ ಹಣ ಕೂಡ ದೊರೆಯುವುದಿಲ್ಲ. ಇನ್ನೂ ಇದೇ ಬೆಳೆ ನಂಬಿ ಮಾಡಿರುವ ಸಾಲ ಯಾವ ರೀತಿ ತೀರಿಸಲಿ?" ಎಂದು ರೈತ ಸುಜೀವನ್ ಕುಮಾರ್ ಪ್ರಶ್ನಿಸಿದರು.
"ಸಂಕಷ್ಟದಲ್ಲಿರುವ ರೈತನ ನೆರವಿಗೆ ಧಾವಿಸಬೇಕಾದ ಬೆಂಗಳೂರಿನ ಹಾಪ್ ಕಾಮ್ಸ್ ಬಣ್ಣ, ಗಾತ್ರ ಮತ್ತು ಗುಣಮಟ್ಟ ಎಂದು ವಿಂಗಡಿಸಿ ರೈತನ್ನು ಸುಲಿಗೆ ಮಾಡುತ್ತದೆ. ಅಲ್ಲದೇ ಕಳೆದ ತಿಂಗಳು ಹಾಪ್ ಕಾಮ್ಸ್‌ಗೆ ಹಾಕಿದ್ದ ಟೊಮೆಟೊ ಹಣವನ್ನು ಇನ್ನೂ ರೈತನಿಗೆ ಪಾವತಿಸಿಲ್ಲ" ಎಂದು ರೈತ ಮುಖಂಡ ಚಂದ್ರಶೇಖರ್ ಆರೋಪಿಸಿದರು.