ಹುಲಿ ಹಲ್ಲುಗಳ ಮಾರಾಟ ಜಾಲ: ನಾಲ್ವರ ಬಂಧನ

ಮಡಿಕೇರಿ: ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ವಿರಾಜಪೇಟೆ ತಾಲ್ಲೂಕು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳ ಹಾಗೂ ತಿತಿಮತಿ ಪ್ರಾದೇಶಿಕ ವಲಯ ಅರಣ್ಯ ಘಟಕ ಯಶಸ್ವಿಯಾಗಿದೆ.
ಗೋಣಿಕೊಪ್ಪದ ಚೆನ್ನಂಗೊಲ್ಲಿ ಬಸ್ ತಂಗುದಾಣದ ಬಳಿ ಅಕ್ರಮವಾಗಿ ಹುಲಿ ಹಲ್ಲುಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿಗಳು ದಾಳಿ ನಡೆಸಿದರು.
ಪೊನ್ನಂಪೇಟೆ ತಾಲ್ಲೂಕಿನ ಸುಳುಗೋಡು ಗ್ರಾಮದ ಗಣೇಶ್ ವೈ.ಸಿ. (20), ಕೋತೂರು ಗ್ರಾಮದ ಸಂತೋಷ್ ಕೆ.ವಿ (25), ಸುಳುಗೋಡು ಗ್ರಾಮದ ಸಂತೋಷ್ ಕುಮಾರ್ ಹೆಚ್.ಆರ್ (29) ಹಾಗೂ ಚಿಕ್ಕಮಂಡೂರು ಗ್ರಾಮದ ಪೆಮ್ಮಂಡ ಪವನ್ ಪೂವಯ್ಯ ಬಂಧಿತ ಆರೋಪಿಗಳು.
ಬಂಧಿತರಿಂದ ಹುಲಿಯ ಆರು ಹಲ್ಲುಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಪೊನ್ನಂಪೇಟೆ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗಳನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸಿ.ಐ.ಡಿ, ಪೊಲೀಸ್ ಅರಣ್ಯ ಘಟಕದ ಪೊಲೀಸ್ ಮಹಾ ನಿರೀಕ್ಷಕ ಕೆ.ವಿ.ಶರತ್‌ಚಂದ್ರ, ಅವರ ನಿರ್ದೇಶನದ ಮೇರೆಗೆ ಮಡಿಕೇರಿ ಸಿ.ಐ.ಡಿ ಪೊಲೀಸ್ ಅಧೀಕ್ಷಕ ಎಸ್.ಸುರೇಶ್ ಬಾಬು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಅರಣ್ಯ ಸಂಚಾರಿದಳದ ಉಪನಿರೀಕ್ಷಕರಾದ ವೀಣಾ ನಾಯಕ್, ಸಿಬ್ಬಂದಿಗಳಾದ ಟಿ.ಪಿ.ಮಂಜುನಾಥ್, ದೇವಯ್ಯ.ಕೆ.ಎಸ್, ಬೀನ.ಸಿ.ಬಿ ಹಾಗೂ ತಿತಿಮತಿ ಉಪ ವಿಭಾಗದ ಎ.ಸಿ.ಎಫ್ ಉತ್ತಯ್ಯ ಪಿ.ಪಿ, ವಲಯ ಅರಣ್ಯಾಧಿಕಾರಿ ಅಶೋಕ್ ಪಿ.ಹುನಗುಂದ, ಉಪವಲಯ ಅರಣ್ಯ ಸಿಬ್ಬಂದಿಗಳಾದ ಹಾಲೇಶ್ ಎಂ.ಸಿ, ಟಿ.ಜಿ.ಸುರೇಶ್, ಜಿ.ಎಸ್.ರೇವಪ್ಪ, ದರ್ಶನ್ ಎಂ. ಹಾಗೂ ಗಗನ್.ಬಿ.ಎ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.