ಅಮೆಜಾನ್‌ ಪ್ರೈಂನಲ್ಲಿ 'ಪುಷ್ಪ-ದಿ ರೈಸ್‌': ಬಿಡುಗಡೆಯಾಗಿ 20 ದಿನದಲ್ಲೇ ಒಟಿಟಿಗೆ

ಅಮೆಜಾನ್‌ ಪ್ರೈಂನಲ್ಲಿ 'ಪುಷ್ಪ-ದಿ ರೈಸ್‌': ಬಿಡುಗಡೆಯಾಗಿ 20 ದಿನದಲ್ಲೇ ಒಟಿಟಿಗೆ

ಹೈದರಾಬಾದ್: ಟಾಲಿವುಡ್‌ ಸ್ಟಾರ್‌ ನಟ ಅಲ್ಲು ಅರ್ಜುನ್‌ ಹಾಗೂ ನಟಿ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪ-ದಿ ರೈಸ್‌' ಸಿನಿಮಾ ಜ.7ರಂದು ಒಟಿಟಿ ವೇದಿಕೆ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ಬಿಡುಗಡೆಯಾಗಲಿದೆ.

ಡಿ.17ಕ್ಕೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ತೆರೆಕಂಡಿತ್ತು.

ಜ.7ರ ರಾತ್ರಿ 8ರಿಂದ ತೆಲುಗು ಸೇರಿದಂತೆ ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ. ಸುಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಮಲಯಾಳಂನ ಖ್ಯಾತ ನಟ ಫಹಾದ್ ಫಾಸಿಲ್, ನಟ 'ಡಾಲಿ' ಧನಂಜಯ್‌ ಅವರೂ ನಟಿಸಿದ್ದಾರೆ.

ಲಾರಿ ಚಾಲಕ 'ಪುಷ್ಪ ರಾಜ್‌' ಪಾತ್ರದಲ್ಲಿ ಅಲ್ಲು ಅರ್ಜುನ್‌ ನಟಿಸಿರುವ ಈ ಚಿತ್ರವು ರಕ್ತಚಂದನದ ಕಳ್ಳಸಾಗಣಿಕೆಯ ಕುರಿತ ಕಥಾಹಂದರವನ್ನು ಹೊಂದಿದೆ. ಚಿತ್ರದಲ್ಲಿ ತಮ್ಮ ಸ್ಟೈಲಿಷ್‌ ಲುಕ್‌ನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಅಲ್ಲು ಅರ್ಜುನ್‌ ಸೆಳೆದಿದ್ದರು.

ರಕ್ತಚಂದನ ಕಳ್ಳಸಾಗಣೆಗೆ ಸಂಬಂಧಿಸಿದ ಕಾಡಿನ ದೃಶ್ಯಗಳ ರೋಚಕ ಚಿತ್ರೀಕರಣ, ದೇವಿಶ್ರೀ ಪ್ರಸಾದ್‌ ಸಂಗೀತವೂ ಪ್ರೇಕ್ಷಕರ ಚಪ್ಪಾಳೆಗಿಟ್ಟಿಸಿತ್ತು. ಚಿತ್ರದ ಮೊದಲನೇ ಭಾಗದ ಅಂತ್ಯದಲ್ಲಿ ಬರುವ ಫಹಾದ್‌ ಫಾಸಿಲ್‌ ಪಾತ್ರ ಮುಂದಿನ ಭಾಗದ ಕಥನದ ಕುತೂಹಲವನ್ನು ಹೆಚ್ಚಿಸಿತ್ತು.