ಸುಮಂತ್ ಅಕ್ಕಿನೇನಿ 2ನೇ ಮದುವೆ? ಲಗ್ನ ಪತ್ರಿಕೆ ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿದ ನಟ

ಟಾಲಿವುಡ್ ನಟ ಅಕ್ಕಿನೇನಿ ಸುಮಂತ್ (Sumanth Akkineni) ಅವರ ಖಾಸಗಿ ಬದುಕಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಕಳೆದೆರಡು ದಿನಗಳಿಂದ ವೈರಲ್ ಆಗುತ್ತಿದೆ. 2006ರಲ್ಲಿಯೇ ವಿಚ್ಛೇದನ ಪಡೆದುಕೊಂಡಿರುವ ಅವರು ಈಗ ಮತ್ತೆ ಎರಡನೇ ಮದುವೆ (Marriage) ಆಗುತ್ತಿದ್ದಾರೆ ಎಂಬ ಸುದ್ದಿ ಎಲ್ಲೆಲ್ಲೂ ಹಬ್ಬಿತ್ತು. ಅದಕ್ಕೆ ಕಾರಣ ಆಗಿದ್ದು ಲಗ್ನ ಪತ್ರಿಕೆ. ಹೌದು, ಸುಮಂತ್ ಅವರ ಎರಡನೇ ಮದುವೆಯದ್ದು ಎನ್ನಲಾದ ಆಹ್ವಾನ ಪತ್ರಿಕೆಯ ಫೋಟೋ ವೈರಲ್ ಆಗಿತ್ತು. ಅದನ್ನು ನೋಡಿದ ಎಲ್ಲರೂ ಸುಮಂತ್ಗೆ ಎರಡನೇ ಮದುವೆ ಆಗುತ್ತಿರುವುದು ನಿಜ ಎಂದೇ ಭಾವಿಸಿದ್ದರು. ಆದರೆ ಅದರ ಹಿಂದಿನ ಸತ್ಯ ಏನು ಎಂಬುದನ್ನು ಸ್ವತಃ ಸುಮಂತ್ ಈಗ ವಿವರಿಸಿದ್ದಾರೆ.
ತೆಲುಗಿನ ಖ್ಯಾತ ನಟ ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೊಮ್ಮಗ ಅಕ್ಕಿನೇನಿ ಸುಮಂತ್. ಗೌರಿ, ಸತ್ಯಂ, ಮಳ್ಳಿರಾವ, ರಾಜ್, ಕ್ಲಾಸ್ಮೇಟ್ಸ್, ಗೋದಾವರಿ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. 2004ರಲ್ಲಿ ನಟಿ ಕೀರ್ತಿ ರೆಡ್ಡಿ ಜೊತೆ ಅವರ ವಿವಾಹ ನೆರವೇರಿತ್ತು. ಆದರೆ ಎರಡೇ ವರ್ಷಕ್ಕೆ ಅವರಿಬ್ಬರ ಮದುವೆ ಮುರಿದುಬಿದ್ದಿತ್ತು. ಅಲ್ಲಿಂದೀಚೆಗೆ ಸುಮಂತ್ ಇನ್ನೊಂದು ಮದುವೆ ಆಗಿರಲಿಲ್ಲ. ಈಗ ಅವರು ಮತ್ತೆ ಪವಿತ್ರಾ ಎಂಬುವವರ ಜೊತೆ ಹಸೆಮಣೆ ಏರುತ್ತಾರೆ ಎಂಬ ಗಾಳಿ ಸುದ್ದಿ ಕೇಳಿಬಂದಾಗ ಎಲ್ಲರಿಗೂ ಅಚ್ಚರಿ ಆಗಿದ್ದು ನಿಜ.
ಈ ಸುದ್ದಿ ಸ್ವತಃ ಸುಮಂತ್ ಕಿವಿಗೂ ಬಿದ್ದಿದೆ. ಅದಕ್ಕೆ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. 'ನಾನು ಎರಡನೇ ಮದುವೆ ಆಗುತ್ತಿಲ್ಲ. ಕಾಕತಾಳೀಯವೆಂದರೆ, ನನ್ನ ಮುಂದಿನ ಸಿನಿಮಾದ ಕಥೆ ಕೂಡ ವಿಚ್ಛೇದನ ಮತ್ತು ಮರುಮದುವೆಯ ಕುರಿತಾಗಿ ಇದೆ. ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಒಂದು ಮದುವೆ ಆಹ್ವಾನ ಪತ್ರಿಕೆಯ ಫೋಟೋ ಲೀಕ್ ಆಗಿದೆ. ಬಹುಶಃ ಅದರಿಂದಲೇ ಇಷ್ಟೆಲ್ಲ ಅಪಾರ್ಥ ಆಗಿರಬಹುದು' ಎಂದು ಅಕ್ಕಿನೇನಿ ಸುಮಂತ್ ಹೇಳಿದ್ದಾರೆ.
???????? Just clearing the air, for those who are interested, and for dear @RGVzoomin who has such immense concern for me ???? https://t.co/ROrftZaadc pic.twitter.com/TS72kbdNA8
— Sumanth (@iSumanth) July 29, 2021
ಸುಮಂತ್ ಮದುವೆಯ ಗಾಳಿಸುದ್ದಿ ಹಬ್ಬುತ್ತಿದ್ದಂತೆಯೇ ಕಾಂಟ್ರವರ್ಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಂತ್, 'ನನ್ನ ಬಗ್ಗೆ ಇಷ್ಟೆಲ್ಲ ಕಾಳಜಿ ತೋರಿಸುತ್ತಿರುವ ರಾಮ್ ಗೋಪಾಲ್ ವರ್ಮಾ ಮತ್ತು ಆಸಕ್ತಿ ಹೊಂದಿರುವ ಎಲ್ಲರಿಗಾಗಿ ಈ ಸ್ಪಷ್ಟನೆ ನೀಡುತ್ತಿದ್ದೇನೆ' ಎಂದು ಟ್ವೀಟ್ ಮಾಡಿದ್ದಾರೆ.