ಸ್ಕ್ರಿಪ್ಟ್ ಬರೆಯೋಕೆ ರೂಮ್ ಹಾಕಿದ ಮೇಲೆ ನಟಿ ಯಾಕೆ ಬಿಟ್ಟೋದ್ಳು? ಓಂ ಪ್ರಕಾಶ್‌ಗೆ ಕೀರ್ತಿ ತಿರುಗೇಟು!

ಸ್ಕ್ರಿಪ್ಟ್ ಬರೆಯೋಕೆ ರೂಮ್ ಹಾಕಿದ ಮೇಲೆ ನಟಿ ಯಾಕೆ ಬಿಟ್ಟೋದ್ಳು? ಓಂ ಪ್ರಕಾಶ್‌ಗೆ ಕೀರ್ತಿ ತಿರುಗೇಟು!

ಕಿರಿಕ್ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ವ್ಯಕ್ತವಾಗುವ ಕಾಮೆಂಟ್‌ಗಳಿಗೆಲ್ಲಾ ತಲೆ ಕೆಡಿಸಿಕೊಳ್ಳದೇ, ಪ್ರತಿಕ್ರಿಯೆ ನೀಡದೇ ಇರುತ್ತಿದ್ದ ವ್ಯಕ್ತಿ. ಆದರೆ ಇತ್ತೀಚೆಗೆ ತಮ್ಮ ವಿರುದ್ಧ ಏನೇ ಆಪಾದನೆ ಬಂದರೂ ಹಾಗೂ ಕಾಮೆಂಟ್ ಮಾಡಿದರೂ ಕಿರಿಕ್ ಕೀರ್ತಿ ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.

ಸಾಯುವ ಹಂತದವರೆಗೂ ಹೋಗಿ ನಂತರ ಬದುಕಬೇಕು ಎಂದು ನನ್ನ ನಿರ್ಧಾರ ಬದಲಿಸಿಕೊಳ್ಳಬೇಕು ಎಂದುಕೊಂಡು ಒಳ್ಳೆಯ ವೈಬ್‌ನೊಂದಿಗೆ ಸಾಮಾಜಿಕ ಜಾಲತಾಣಕ್ಕೆ ಬಂದಿದ್ದ ಕಿರಿಕ್ ಕೀರ್ತಿ ಕುಟುಂಬದ ವಿಚಾರದ ಕುರಿತು ಕೇಳಿಬಂದಿದ್ದ ಸುದ್ದಿ ಕುರಿತು ಕಿಡಿಕಾರಿದ್ದರು.

ನಾನಾಗಿ ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾಹಿತಿ ನೀಡುವವರೆಗೂ ಏನೇ ಸುದ್ದಿ ಕೇಳಿಬಂದರೂ ಅದೆಲ್ಲವೂ ಸುಳ್ಳು ಎಂದಿದ್ದ ಕಿರಿಕ್ ಕೀರ್ತಿ ಇದೀಗ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ತನ್ನ ವಿರುದ್ಧ ನೀಡಿದ ಹೇಳಿಕೆ ವಿರುದ್ಧ ಕಿಡಿಕಾರಿದ್ದಾರೆ. ಹೌದು, ಕಿರಿಕ್ ಕೀರ್ತಿ ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ನಿರ್ದೇಶಕ ಓಂ ಪ್ರಕಾಶ್ ರಾವ್ 'ಕಿರಿಕ್ ಕೀರ್ತಿ' ಎಂಬ ಶೀರ್ಷಿಕೆ ಅಡಿಯಲ್ಲಿಯೇ ಚಿತ್ರವನ್ನು ಕಿರಿಕ್ ಕೀರ್ತಿಗೆ ಮಾಡಲು ಮುಂದಾಗಿದ್ದರು.

ನಟಿ ಸಂಜನಾ ಚಿದಾನಂದ್ ನಾಯಕಿಯಾಗಿ ಆಯ್ಕೆಯಾಗಿದ್ದ ಈ ಚಿತ್ರದ ಫೋಟೊಶೂಟ್ ಸಹ ನಡೆದಿತ್ತು. ಆದ್ರೆ ಸದ್ದು ಮಾಡುತ್ತಾ ಆರಂಭವಾಗಿದ್ದ ಈ ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಲೇ ಇಲ್ಲ ಹಾಗೂ ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ನಿಂತು ಹೋಗಲು ಕಾರಣವೇನು ಎಂಬುದೂ ಸಹ ಆಚೆ ಬಂದಿರಲಿಲ್ಲ. ಈ ವಿಷಯದ ಕುರಿತು ಇದೀಗ ನಿರ್ದೇಶಕ ಓಂ ಪ್ರಕಾಶ್ ರಾವ್ ಸ್ಪೀಡ್ ನ್ಯೂಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದು 'ಕಿರಿಕ್ ಕೀರ್ತಿ' ಸಿನಿಮಾ ನಿಲ್ಲಿಸಲು ಕಾರಣ ಕಿರಿಕ್ ಕೀರ್ತಿ ನಡೆವಳಿಕೆ, ಆತನೊಬ್ಬ ನಾನ್‌ಸೆನ್ಸ್ ಎಂದು ಹೇಳಿಕೆ ನೀಡಿದ್ದಾರೆ.

ಈ ಹೇಳಿಕೆ ವೈರಲ್ ಆದ ಬೆನ್ನಲ್ಲೇ ಇದರ ಕುರಿತು ಕಿರಿಕ್ ಕೀರ್ತಿ ಸಹ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡು ಕಿರಿಕ್ ಕೀರ್ತಿ ಸಿನಿಮಾ ನಿಲ್ಲಲು ಕಾರಣವೇನು, ಕಿರಿಕ್ ಕೀರ್ತಿ ಸಿನಿಮಾದಿಂದ ಯಾರು ಆಚೆ ಬಂದರು ಎಂಬುದು ಗೊತ್ತಿದೆ, ಬೇಕಿದ್ದರೆ ಬನ್ನಿ ಇದರ ಬಗ್ಗೆ ಮಾತನಾಡೋಣ ಎಂದು ತಿರುಗೇಟು ನೀಡಿದ್ದಾರೆ.

ಹೌದು, ಕರ್ನಾಟಕ ಕಂಡ ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಯುಟ್ಯೂಬ್ ಚಾನೆಲ್‌ನಲ್ಲಿ ನಡೆದ ಸಂದರ್ಶನದಲ್ಲಿ ಕೀರ್ತಿ ಕ್ಯಾರೆಕ್ಟರ್ ನನಗೆ ಇಷ್ಟವಾಗಲಿಲ್ಲ, ಅವರ ಆಟಿಟ್ಯೂಡ್ ಇಷ್ಟವಾಗಲಿಲ್ಲ, ಹಾಗಾಗಿ ಅವನನ್ನು ಕಿರಿಕ್ ಕೀರ್ತಿ ಸಿನಿಮಾದಿಂದ ಹೊರಹಾಕಿದೆ ಅಂತ ಹೇಳಿಕೆ ನೀಡಿದ್ದಾರೆ, ಅದನ್ನು ಶೇರ್ ಮಾಡಿಕೊಂಡು ಕೆಲವರು ಏನ್ ಕೀರ್ತಿ ನಿನ್ನ ಬಾಳು ಎಂದೆಲ್ಲಾ ಹೊಟ್ಟೆ ತುಂಬಿಸಿಕೊಳ್ತಿದ್ದಾರೆ ಎಂಬ ಹೇಳಿಕೆಯಿಂದ ವಿಡಿಯೊವನ್ನು ಕೀರ್ತಿ ಶುರು ಮಾಡಿದ್ದಾರೆ.

ಇನ್ನೂ ಮುಂದುವರಿದ ಮಾತನಾಡಿದ ಕೀರ್ತಿ ಗೌರವಾನ್ವಿತ ಓಂ ಪ್ರಕಾಶ್ ರಾವ್ ಸರ್ ಅವರೇ ಸಿನಿಮಾ ಯಾಕೆ ನಿಂತೋಯ್ತು, ನಾನ್ ಯಾಕೆ ಸಿನಿಮಾದಿಂದ ಹೊರಬಂದೆ, ಮೊದಲ ನಟಿ ಸಿನಿಮಾದಿಂದ ಯಾಕೆ ಹೊರಗಡೆ ಹೋದಳು, ಫೋಟೊಶೂಟ್ ದಿನ ಏನು ನಡೆಯಿತು, ಬಿಗ್ ಬಾಸ್ ಮೈಸೂರು ಇವೆಂಟ್ ದಿನ ಏನು ಗಲಾಟೆ ನಡೆಯಿತು, ಅಲ್ಲಿಂದ ಮೊದಲ ನಟಿ ಯಾಕೆ ಬಿಟ್ಟೋದ್ಳು, ಆಮೇಲೆ ಸೆಕೆಂಡ್ ಹಿರೋಯಿನ್ ಹೇಗ್ ಸೆಲೆಕ್ಟ್ ಆದಳು, ಮೈಸೂರಲ್ಲಿ ಸ್ಕ್ರಿಪ್ಟ್ ಬರೆಯಲು ರೂಮ್ ಹಾಕಿದ ಮೇಲೆ ಎರಡನೇ ನಟಿಯೂ ಯಾಕೆ ಬಿಟ್ಟೋದ್ಳು, ಆಮೇಲೆ ನಾನು ನಿಮಗೆ ಏನು ಹೇಳಿ ಬಂದೆ ಇದನ್ನೆಲ್ಲಾ ಚರ್ಚಿಸಲು ಒಮ್ಮೆ ಕುಳಿತುಕೊಳ್ಳೋಣ ಎಂದು ಸಾಲು ಸಾಲು ಪ್ರಶ್ನೆಗಳನ್ನು ಇಟ್ಟು ನೆಟ್ಟಿಗರಲ್ಲಿ ಭಾರೀ ಕುತೂಹಲ ಹಾಗೂ ಗೊಂದಲ ಮೂಡಿಸಿದ್ದಾರೆ.

ಹೀಗೆ ನೇರವಾಗಿ ಕೆಲ ವಿಷಯಗಳ ಬಗ್ಗೆ ನನಗೆ ತಿಳಿದಿದೆ, ಇದನ್ನು ನಾನು ಎಲ್ಲಿಯೂ ಚರ್ಚಿಸಿಲ್ಲ ಎಂದು ಹೇಳಿಕೆ ನೀಡಿರುವ ಕಿರಿಕ್ ಕೀರ್ತಿ ನೇರಾನೇರ ಚರ್ಚೆಗೆ ಓಂ ಪ್ರಕಾಶ್ ಅವರನ್ನು ಆಹ್ವಾನಿಸಿದ್ದಾರೆ. ಪರೋಕ್ಷವಾಗಿ ಕೆಲ ಗಂಭೀರ ಅಂಶಗಳ ಚರ್ಚೆಗೆ ಆಹ್ವಾನಿಸಿರುವ ಕಿರಿಕ್ ಕೀರ್ತಿಗೆ ಓಂ ಪ್ರಕಾಶ್ ರಾವ್ ಸ್ಪಂದಿಸ್ತಾರಾ ಕಾದು ನೋಡಬೇಕಿದೆ. ಕೊನೆಗೆ ಬೇರೆ ನಟನನ್ನು ಹಾಕಿಕೊಂಡು ಈ ಚಿತ್ರವನ್ನು ಪೂರ್ಣಗೊಳಿಸಿರುವ ಓಂ ಪ್ರಕಾಶ್ ಅವರಿಗೆ ಶುಭ ಕೋರಿರುವ ಕಿರಿಕ್ ಕೀರ್ತಿ ನಿಮಗೆ ಒಳ್ಳೆಯದಾಗಲಿ ಎಂದಿದ್ದಾರೆ. ಅಲ್ಲದೇ ಆ ಚಿತ್ರಕ್ಕೆ ಪ್ರಚಾರ ಸಿಗಲಿ ಎಂದು ಈ ಹೇಳಿಕೆ ನೀಡಿರಬಹುದು ಎಂದೂ ಸಹ ಕಿರಿಕ್ ಕೀರ್ತಿ ಕಾಲೆಳೆದಿದ್ದಾರೆ.