ಯಡಿಯೂರಪ್ಪ ಮನೆಯಲ್ಲಿ ಅಮಿತ್ ಶಾ ಬ್ರೇಕ್ ಫಾಸ್ಟ್: ಶುರುವಾಯ್ತು ಟಿಕೆಟ್ ಆಕಾಂಕ್ಷಿಗಳಿಗೆ ಭಾರಿ ಆತಂಕ

ಬೆಂಗಳೂರು, ಮಾರ್ಚ್ 24: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಈ ಬಾರಿ ಅಧಿಕಾರದ ಗದ್ದುಗೆ ಹಿಡಿಯಲು ರಾಜ್ಯ ಬಿಜೆಪಿ ನಾಯಕರು ಪಣತೊಟ್ಟಿದ್ದು, ಹೈಕಮಾಂಡ್ ನಾಯಕರ ಮೂಲಕ ಚುನಾವಣಾ ಪ್ರಚಾರ ನಡೆಯುತ್ತಿದೆ.
ಇನ್ನೂ ವಿವಿಧ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲು ಬೆಂಗಳೂರಿಗೆ ಆಗಮಿಸಿರುವ ಅಮಿತ್ ಶಾ ಈ ಬಾರಿ ಚುನಾವಣಾ ಸಿದ್ದತೆ ಕುರಿತು ರಾಜ್ಯ ನಾಯಕರ ಜೊತೆಗೆ ಸಭೆ ನಡೆಸುವ ಸಾಧ್ಯತೆ ಇದೆ.
ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಕಾವೇರಿ ನಿವಾಸಕ್ಕೆ ಅಮಿತ್ ಭೇಟಿ ನೀಡಲಿದ್ದು, ಉಪಾಹಾರಕ್ಕೆ ಅಮಿತ್ ಶಾರನ್ನು ಬಿಎಸ್ವೈ ಆಹ್ವಾನಿಸಿದ್ದಾರೆ. ಯಡಿಯೂರಪ್ಪ ನಿವಾಸಕ್ಕೆ ಅಮಿತ್ ಶಾ ಭೇಟಿ ವಿಚಾರ ವಿಶೇಷವಾಗಿದ್ದು, ಅಷ್ಟೇ ಕುತೂಹಲ ಸಹ ಕೆರಳಿಸಿದೆ ಎನ್ನಲಾಗುತ್ತಿದೆ. ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಆಹ್ವಾನ ನೀಡಲಾಗಿದೆ.
ಚುನಾವಣಾ ಚಾಣಕ್ಯ ಎಂದೇ ಪ್ರಸಿದ್ದಿ ಆಗಿರುವ ಪ್ರತಿ ಬಾರೀಯೂ ರಾಜ್ಯಕ್ಕೆ ಆಗಮಿಸಿದ್ದಾಗ ಹೋಟೆಲ್‌ನಲ್ಲಿಯೇ ಉಳಿದುಕೊಂಡು, ಅಲ್ಲಿಂದಲೇ ರಾಜ್ಯ ರಾಜಕಾರಣದ ಕುರಿತು ಸಂಬಂಧಪಟ್ಟ ನಾಯಕರನ್ನು ಕರೆಸಿ ಚರ್ಚೆ ಮಾಡುತ್ತಿದ್ದರು. ಆದರೆ ಈ ಬಾರಿ ರಾಜ್ಯಕ್ಕೆ ಆಗಮಿಸುತ್ತಿರುವ ಬಿಜೆಪಿ ಚಾಣಕ್ಯ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಬ್ರೇಕ್ ಫಾಸ್ಟ್ ಮಾಡಲಿದ್ದಾರೆ. ಆದರೆ, ಇಲ್ಲಿ ಕೆಲವೇ ನಾಯಕರಿಗೆ ಮಾತ್ರ ಬ್ರೇಕ್ ಫಾಸ್ಟ್ ಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಇನ್ನೂ ಅಮಿತ್ ಶಾ ದಾವಣಗೆರೆಯಲ್ಲಿ ನಡೆಯಲಿರುವ ವಿಜಯಸಂಕಲ್ಪ ಸಮಾವೇಶದ ಕುರಿತು ಚರ್ಚೆ ನಡೆಯಲಿದ್ದು, 15 ದಿನಗಳಲ್ಲಿ ಚುನಾವಣಾ ದಿನಾಂಕ ಘೋಷಣೆ ಆಗುವ ಸಾಧ್ಯತೆ ಇದೆ. ಇತ್ತ ಕಾಂಗ್ರೆಸ್ ನಾಯಕರು ಎರಡು ದಿನಗಳಲ್ಲಿ ಪಟ್ಟಿ ಬಿಡುಗಡೆಯಾಗಲಿದ್ದು, ಈ ಕುರಿತು ಯಡಿಯೂರಪ್ಪ ಜೊತೆಗೆ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ.
ಇನ್ನೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಬಿಜೆಪಿಯಲ್ಲಿ ಹೆಚ್ಚಾಗಿದ್ದು, ಈ ಬಾರಿ ವಲಸಿಗ ಬಿಜೆಪಿಗರಿಗೆ ಟಿಕೆಟ್ ಕೈ ತಪ್ಪುವ ಆತಂಕ ಶುರುವಾಗಿದ್ದು, ಇತ್ತ ಹಾಲಿ ಕೆಲ ಶಾಸಕರಿಗೆ ಸಹ ಟಿಕೆಟ್ ಕೈ ತಪ್ಪಲಿದೆ. ಹೀಗಾಗಿ ಬಿಜೆಪಿ ದಿಗ್ಗಜರ ಬ್ರೇಕ್ ಫಾಸ್ಟ್ ಮಿಟಿಂಗ್ ನಲ್ಲಿ ಟಿಕೆಟ್ ಹಂಚಿಕೆ ಕುರಿತು ಅಂತಿಮವಾಗಿ ಆಯ್ಕೆ ಕುರಿತು ಚರ್ಚೆ ನಡೆಯಲಿದೆ.
ಇನ್ನೂ ಸಿದ್ಧವಾಗಿರುವ ಪಟ್ಟಿಯಲ್ಲಿನ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕುರಿತು ಚರ್ಚೆ ಮಾಡಲಾಗುತ್ತದೆ. ಕಾಂಗ್ರೆಸ್ ಪಟ್ಟಿ ಘೋಷಣೆಯ ನಂತರ ಕಾಂಗ್ರೆಸ್ ನಲ್ಲಿ ಆಗುವ ಗೊಂದಲಗಳ ನಂತರ ಬಿಜೆಪಿ ಪಟ್ಟಿ ಮಾಡುವ ಕುರಿತು ಚರ್ಚೆಯಾಗಲಿದೆ. ಇನ್ನೂ ಟಿಕೆಟ್ ಆಕಾಂಕ್ಷಿಗಳ ಕುರಿತು ಅಮಿತ್ ಶಾ ಹಾಗೂ ಯಡಿಯೂರಪ್ಪ ನಡುವೆ ಚರ್ಚೆ ನಡೆಯಲಿದ್ದು, 224 ಕ್ಷೇತ್ರಗಳ ಟಿಕೆಟ್ ಆಕಾಂಕ್ಷಿಗಳಿಗೆ ಅಮಿತ್‌ಶಾ ಹಾಗೂ ಬಿಎಸ್ ಯಡಿಯೂರಪ್ಪ ಭೇಟಿ ಭಾರಿ ಕುತೂಹಲ ಮತ್ತು ಆತಂಕವನ್ನು ಸೃಷ್ಟಿಸಿದೆ.