ಕೃಷಿ ಕಾಯ್ದೆಗಳು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ: ಎಚ್.ಕೆ.ಪಾಟೀಲ

ಕೃಷಿ ಕಾಯ್ದೆಗಳು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ: ಎಚ್.ಕೆ.ಪಾಟೀಲ

ಗದಗ: ಕೇಂದ್ರ ಸರಕಾರದ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ಪಶ್ಚಾತಾಪದ ಮೊದಲ ಹೆಜ್ಜೆ ಇದಾಗಿದೆ. ಮೂರು ಕರಾಳ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಿದ ರೈತರನ್ನು ಉಗ್ರರು, ದೇಶ ದ್ರೋಹಿಗಳು ಎಂದು ಅಪಮಾನಿಸಿದ್ದ ಬಿಜೆಪಿ ನಾಯಕರು ರೈತರ ಪಾದಸ್ಪರ್ಶಿಸಿ ಕ್ಷಮೆ ಕೋರಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ ಆಗ್ರಹಿಸಿದರು.

ಕಳೆದ ಒಂದು ವರ್ಷದಿಂದ ರೈತರು ಮಳೆ, ಗಾಳಿ ಚಳಿ ಎನ್ನದೇ ನಿರಂತರ ಪ್ರತಿಭಟನೆ ನಡೆಸಿದ್ದರು.

ರೈತರ ಈ ಕಿಚ್ಚು ದೇಶ ವ್ಯಾಪಿ ಪಸರಿಸಿತ್ತು. ಹೋರಾಟದಲ್ಲಿ ತೊಡಗಿದವರಿಗೆ ನಕಲಿ ರೈತರು, ಉಗ್ರವಾದಿಗಳು, ದೇಶ ದ್ರೋಹಿಗಳ ಪಟ್ಟ ಕಟ್ಟಿದರು. ರೈತರು ಮೇಲೆ ಜೀಪ್ ಹಾಯಿಸಿ, ಕೊಲೆಗೆ ಯತ್ನಿಸಿದ್ದರು. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಕೇಂದ್ರ ಸರಕಾರ ತನ್ನ ರೈತ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿರುವುದು ಸಹಜವಾಗಿ ರೈತಾಪಿ ಸಮುದಾಯದಲ್ಲಿ ಸಮಾಧಾನ ತಂದಿದೆ

ರೈತ ಹೋರಾಟವನ್ನು ಬೆಂಬಲಿಸಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರು ದಿಟ್ಟ ನಿಲುವು ಪ್ರದರ್ಶಿಸಿದ್ದರು ಎಂದು ಇದೇ ವೇಳೆ ಸ್ಮರಿಸಿದರು.