ವೆಲ್ಲೋರಿನಲ್ಲಿ ಭಾರೀ ದುರಂತ: ಗೋಡೆ ಕುಸಿದು 9 ಜನರ ಸಾವು
ವೆಲ್ಲೋರ್: ಭಾರೀ ಮಳೆಯಿಂದಾಗಿ ವಿವಿಧೆಡೆಗಳಲ್ಲಿ ಭೂಕುಸಿತ, ಕಟ್ಟಡ ಕುಸಿತಗಳು ವರದಿಯಾಗುತ್ತಿವೆ. ತಮಿಳುನಾಡಿನ ವೆಲ್ಲೋರ್ ಜಿಲ್ಲೆಯಲ್ಲಿ ಇಂಥ ಒಂದು ದೊಡ್ಡ ದುರ್ಘಟನೆ ಸಂಭವಿಸಿದೆ. ಬಹುಮಹಡಿ ಕಟ್ಟಡದ ಗೋಡೆ ಕುಸಿದು, ನಾಲ್ಕು ಮಕ್ಕಳೂ ಸೇರಿದಂತೆ ಒಂಭತ್ತು ಜನರು ಮೃತಪಟ್ಟಿದ್ದಾರೆ.
ವೆಲ್ಲೋರಿನ ಪೆರ್ನಂಪಟ್ಟು ಪ್ರದೇಶದಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದ ಬಡಾವಣೆಯಲ್ಲಿ, ಶುಕ್ರವಾರ, ಶಿಥಿಲಗೊಂಡಿದ್ದ ಕಟ್ಟಡವೊಂದರ ಗೋಡೆ ಕುಸಿದಿದೆ. ಪರಿಣಾಮವಾಗಿ ಮನೆಗಳ ಒಳಗಿದ್ದ ಒಂಭತ್ತು ಜನರು ಸಾವಪ್ಪಿದ್ದು, ಇನ್ನೂ ಅನೇಕರಿಗೆ ತೀವ್ರ ಗಾಯಗಳುಂಟಾಗಿದೆ. ಪೆರ್ನಂಪಟ್ಟು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಈ ದುರ್ಘಟನೆಯ ಬಗ್ಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ದುಃಖ ವ್ಯಕ್ತಪಡಿಸಿದ್ದು, ಮೃತಪಟ್ಟ ಒಂಭತ್ತು ಜನರ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ