ಬಾಚಿ ಬಾಚಿ ಕೊಟ್ಟ ಪಂಜುರ್ಲಿ ದೈವಕ್ಕೆ ಹರಕೆ ಕೊಟ್ಟ ರಿಷಬ್ ಶೆಟ್ಟಿ: ವಿಡಿಯೋ ವೈರಲ್

ದೈವದ ಆಶೀರ್ವಾದದಿಂದಲೇ 'ಕಾಂತಾರ' ಸಿನಿಮಾ ಗೆದ್ದಿದೆ ಎಂದು ಹೊಂಬಾಳೆ ಸಂಸ್ಥೆ ಹೇಳುತ್ತಾ ಬಂದಿದೆ. ಸಾಕಷ್ಟು ಜನರು ಇದನ್ನು ನಂಬಿದ್ದಾರೆ. ದೈವದ ಕೃಪೆಯಿಂದಲೇ ಸಣ್ಣ ಸಿನಿಮಾವೊಂದು ವಿಶ್ವ ಮಟ್ಟದಲ್ಲಿ ಸದ್ದು ಮಾಡಿದೆ ಎಂದು ಒಪ್ಪಿಕೊಳ್ಳುತ್ತಾರೆ.
'ಕಾಂತಾರ' ಸಿನಿಮಾ ಅದ್ಭುತ ಸಕ್ಸಸ್ ಬೆನ್ನಲ್ಲೇ ಚಿತ್ರತಂಡ ದೈವದ ಹರಕೆ ತೀರಿಸಿತ್ತು. ಇಡೀ ಚಿತ್ರತಂಡ ಮಂಗಳೂರಿನಲ್ಲಿ ಅಣ್ಣಪ್ಪ ಪಂಜುರ್ಲಿ ದೈವಕ್ಕೆ ಕೋಲ ನೀಡಿತ್ತು. ಡಿಸೆಂಬರ್ 8ರಂದು ತಂಡ ಪೂಜೆ ಸಲ್ಲಿಸಿತ್ತು. ಅದರ ವಿಡಿಯೋವನ್ನು ಈಗ ಹಂಚಿಕೊಂಡಿದೆ. "ಹರಕೆ ತೀರಿಸಿದ ಕ್ಷಣಗಳು" ಬರೆದು ಪೂಜಾ ವಿಧಿ ವಿಧಾನಗಳ ದರ್ಶನ ಮಾಡಿಸಿದೆ. ನಟ-ನಿರ್ದೇಶಕ ರಿಷಬ್ ಶೆಟ್ಟಿ ಮಡದಿ ಮಕ್ಕಳ ಸಮೇತ ಹೋಗಿದ್ದರು. ಇನ್ನು ಚಿತ್ರದ ನಾಯಕಿ ಸಪ್ತಮಿ ಗೌಡ, ನಿರ್ಮಾಪಕರಾದ ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ಸೇರಿದಂತೆ ಇಡೀ ತಂಡ ಪೂಜೆಯಲ್ಲಿ ಭಾಗಿ ಆಗಿತ್ತು.
'ಕಾಂತಾರ' ಸಿನಿಮಾ ಪ್ರಾರಂಭಿಸುವ ಮುನ್ನ ರಿಷಬ್ ಶೆಟ್ಟಿ ದೈವದ ಅನುಗ್ರಹ ಕೇಳಿದ್ದರು. ದೈವದ ಅನುಮತಿ ಪಡೆದು ಬಹಳ ಶ್ರದ್ಧೆ ಭಕ್ತಿಯಿಂದ ಸಿನಿಮಾ ಮಾಡಿದ್ದರು. ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಕೂಡ ಸಿಕ್ಕಿತ್ತು.
ನಿರೀಕ್ಷೆ ಮೀರಿ 'ಕಾಂತಾರ' ಸಕ್ಸಸ್
ಕರಾವಳಿ ದೈವ, ಭೂತಾರಾಧನೆ, ಅಲ್ಲಿನ ಭಾಷೆ, ಸಂಸ್ಕೃತಿ, ಪ್ರಕೃತಿ ಮತ್ತು ಮನುಷ್ಯರ ನಡುವಿನ ಸಂಬಂಧ ಎಲ್ಲವನ್ನು ಸೇರಿಸಿ ಸಿನಿಮಾ ಮಾಡಿದ್ದರು. ಅದರಲ್ಲೂ ಕೊನೆಯ 20 ನಿಮಿಷಗಳ ಸಿನಿಮಾ ಪ್ರೇಕ್ಷಕರಿಗೆ ದೈವಿಕ ಅನುಭವ ನೀಡಿತ್ತು. ರಿಷಬ್ ಶೆಟ್ಟಿ ದೈವದ ಕಾರ್ಣಿಕ ಹೇಳುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದರು. ಅವರ ಪ್ರಯತ್ನಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಮೊದಲಿಗೆ ಇದು ಫಾರೆಸ್ಟ್ ಆಫೀಸರ್ ಹಾಗೂ ಕಾಡಿನ ಪಕ್ಕದ ಊರಿನ ಜನರ ನಡುವಿನ ಸಂಘರ್ಷದ ಕಥೆ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಅದನ್ನು ಮೀರಿ ಸಿನಿಮಾ ದೈವಕ ಶಕ್ತಿ ತುಂಬಿಕೊಂಡಿತ್ತು.
400 ಕೋಟಿ ರೂ. ಕಲೆಕ್ಷನ್
'ಕಾಂತಾರ' ಸಿನಿಮಾ ಸಕ್ಸಸ್ ಬಾಲಿವುಡ್ ಮಂದಿಯನ್ನು ಬೆರಗಾಗಿಸಿದ್ದು ಸುಳ್ಳಲ್ಲ. ಅಂದಾಜು 15 ಕೋಟಿ ಬಜೆಟ್‌ನಲ್ಲಿ ನಿರ್ಮಾಣ ಆಗಿದ್ದ ಸಿನಿಮಾ ಬರೋಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಬಜೆಟ್‌ಗಿಂತ 2 ಪಟ್ಟು, 5 ಪಟ್ಟು, 10 ಪಟ್ಟು ಅಲ್ಲ 20 ರಿಂದ 30 ಪಟ್ಟು ಹೆಚ್ಚು ಗಳಿಕೆ ಮಾಡಿತ್ತು. ಬರೀ ಕನ್ನಡದಲ್ಲಿ ರಿಲೀಸ್ ಮಾಡಿದ್ದ ಸಿನಿಮಾವನ್ನು ಪರಭಾಷಿಕರು ಬೇಡಿಕೆ ಇಟ್ಟು ಡಬ್ ಮಾಡಿಸಿಕೊಂಡು ನೋಡಿದರು. ಹಿಂದಿ ಬೆಲ್ಟ್‌ನಲ್ಲಿ ಸಿನಿಮಾ 70 ಕೋಟಿ ಕಲೆಕ್ಷನ್ ಮಾಡಿತ್ತು.
ರಿಷಬ್‌ಗೆ ದೈವದ ಅನುಗ್ರಹ
ನಟ, ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರದ ಒಂದು ಸೀಕ್ವೆನ್ಸ್ ಶೂಟಿಂಗ್ ಬಳಿಕ ತಂಡದ ಜೊತೆ ಪಂಜುರ್ಲಿ ದೈವದ ಕೋಲಕ್ಕೆ ಹೋಗಿದ್ದರು. ದೈವದ ಬಳಿ ಮುಂದೆ 'ಕಾಂತಾರ' ಸಿನಿಮಾ ಬಗ್ಗೆ ಪ್ರಶ್ನೆ ಇಟ್ಟಿದ್ದರು. ದೈವದ ಕಾರ್ಣಿಕ ಹೇಳುವ ಸಿನಿಮಾ ಮಾಡುತ್ತಿದ್ದೇನೆ, ಅನುಗ್ರಹ ಬೇಕು ಎಂದು ಕೇಳಿಕೊಂಡಿದ್ದೆ. ಅಲ್ಲಿ ಪಂಜುರ್ಲಿ ದೈವ ತಮ್ಮ ಬಣ್ಣ ತೆಗೆದು ಅವರ ಮುಖಕ್ಕೆ ಹಚ್ಚಿತ್ತು. ಆ ಕ್ಷಣ ನನಗೆ ರೋಮಾಂಚನವಾಗಿತ್ತು. ಒಂದು ರೀತಿಯ ಶಕ್ತಿಯ ಸಂಚಲನವಾಗಿತ್ತು. ಎಲ್ಲವೂ ದೈವದ ಇಚ್ಛೆ. ಪಂಜುರ್ಲಿ ದೈವದ ಕೋಲದಲ್ಲಿ ನಮಗೆ ಆಶೀರ್ವಾದ ಸಿಕ್ಕಿತ್ತು. ಸಿನಿಮಾ ಶೂಟಿಂಗ್ ವೇಳೆ ಒಂದು ಶಕ್ತಿಯ ರಕ್ಷಣೆ ಇತ್ತು. ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಕ್ಕಿತ್ತು" ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
'ಕಾಂತಾರ'- 2ಗೆ ದೈವದ ಅನುಮತಿ?
ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಸೇವೆ ಸಲ್ಲಿಸುವ ಮಡಿವಾಳ ಸಮುದಾಯದ ಪ್ರಮುಖರ ಮನೆಯಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ 'ಕಾಂತಾರ' ಚಿತ್ರತಂಡ ಹರಕೆ ತೀರಿಸಿತ್ತು. ಅದೇ ಸಮಯದಲ್ಲಿ ಸಿನಿಮಾ ಸೀಕ್ವೆಲ್ ಮಾಡುವ ಬಗ್ಗೆಯೂ ಅನುಮತಿ ಕೇಳಿದ್ದಾಗಿ ವರದಿ ಕೇಳಿದ್ದು, ಕೆಲ ಸಲಹೆಗಳೊಂದಿಗೆ ದೈವ ಅನುಮತಿ ನೀಡಿದ್ದಾಗಿಯೂ ವರದಿಯಾಗಿದೆ. ಇನ್ನು ಪ್ರೇಕ್ಷಕರು ಕೂಡ 'ಕಾಂತಾರ' -2 ಸಿನಿಮಾ ನೋಡಲು ಕಾತರರಾಗಿದ್ದಾರೆ.