ಯುಟ್ಯೂಬ್ನಲ್ಲಿ ಅತಿಹೆಚ್ಚು ಟ್ಯಾಗ್ ಆದ ಟಾಪ್ 10 ಬಿಗ್ಗೆಸ್ಟ್ ಸೌತ್ ಸ್ಟಾರ್ಸ್; ಕನ್ನಡದಿಂದ ಇಬ್ಬರೇ!

ಈ ಹಿಂದೆ ಚಿತ್ರವೊಂದರ ಹಾಡುಗಳು ಹಾಗೂ ಅದರ ವಿಶೇಷತೆಗಳೇನು ಎಂಬ ವಿಷಯ ಸಿನಿ ರಸಿಕರಿಗೆ ಮುಟ್ಟಬೇಕೆಂದರೆ ರೇಡಿಯೊ ಕ್ಯಾಸೆಟ್ಗಳು ಹಾಗೂ ದಿನಪತ್ರಿಕೆಗಳು ಅತಿಮುಖ್ಯದ್ದಾಗಿದ್ದವು. ಆದರೆ ಈಗಿನ ಮೊಬೈಲ್ ಡೇಟಾ ಯುಗದಲ್ಲಿ ಇವುಗಳಿಗೆ ಪರ್ಯಾಯವಾಗಿ ಯುಟ್ಯೂಬ್ ಹಾಗೂ ಆನ್ಲೈನ್ ನ್ಯೂಸ್ ಮತ್ತು ಎಂಟರ್ಟೈನ್ಮೆಂಟ್ ವೆಬ್ಸೈಟ್ ಹುಟ್ಟಿಕೊಂಡಿವೆ.
ಚಿತ್ಗಳ ಕುರಿತಾದ ಯಾವುದೇ ಮಾಹಿತಿ ಇರಲಿ ಈ ವೆಬ್ ತಾಣಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದ ವಿವಿಧ ವೇದಿಕೆಗಳಲ್ಲಿ ಲಭಿಸಲಿದೆ. ಇನ್ನು ಮುಂಬರುವ ಚಿತ್ರಗಳ ಹಾಡುಗಳು, ಟೀಸರ್ ಹಾಗೂ ಟ್ರೈಲರ್ ವಿಡಿಯೊಗಳನ್ನು ಯುಟ್ಯೂಬ್ನಲ್ಲಿ ಬಿಡುಗಡೆ ಮಾಡಿ ಜನರಿಗೆ ಸುಲಭವಾಗಿ ತಲುಪಿಸಲಾಗುತ್ತಿದೆ. ಕೇವಲ ಚಿತ್ರಗಳ ಹಾಡು ಹಾಗೂ ಟ್ರೈಲರ್ ಮಾತ್ರವಲ್ಲದೇ ಚಿತ್ರಗಳ ಕುರಿತು ನಡೆಯುವ ಆಡಿಯೊ ಬಿಡುಗಡೆ, ಟೀಸರ್ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರವೂ ಸಹ ಈಗ ಟಿವಿ ಬದಲಾಗಿ ಇದೇ ಯುಟ್ಯೂಬ್ನಲ್ಲಿ ಲಭ್ಯವಿರಲಿದೆ.
ಇನ್ನು ಚಿತ್ರಗಳ ಪ್ರಚಾರದ ವಿಚಾರಕ್ಕೆ ಬಂದರೂ ಸಹ ಈ ಯುಟ್ಯೂಬ್ ಮಹತ್ವ ದೊಡ್ಡ ಮಟ್ಟದ್ದೇ. ಇದಕ್ಕೆ ತಾಜಾ ಉದಾಹರಣೆ ಎಂದರೆ ಕಳೆದ ವಾರವಷ್ಟೇ ಬಿಡುಗಡೆಗೊಂಡ ಸಿನಿಮಾ ಕ್ರಾಂತಿ. ನಟ ದರ್ಶನ್ ಹಾಗೂ ಮಾಧ್ಯಮಗಳ ನಡುವಿನ ಜಗಳದಿಂದ ದರ್ಶನ್ ಕುರಿತಾದ ಯಾವುದೇ ಸುದ್ದಿಯನ್ನು ಪ್ರಸಾರ ಮಾಡುವುದು ಬೇಡ ಎಂದು ಮೀಡಿಯಾ ತೀರ್ಮಾನ ಕೈಗೊಂಡಿದ್ದು, ದರ್ಶನ್ ಕುರಿತಾದ ಯಾವುದೇ ಸುದ್ದಿ ಬೇಕಿದ್ದರೂ ಅವುಗಳು ಯುಟ್ಯೂಬ್ನಲ್ಲಿ ಮಾತ್ರ ಸಿಗಲಿವೆ.
ಕ್ರಾಂತಿ ಚಿತ್ರದ ಪ್ರಚಾರ ಒಂದು ಹಂತ ಮೇಲೇರಿದ್ದೂ ಸಹ ಇದೇ ಯುಟ್ಯೂಬ್ ಚಾನೆಲ್ಗಳಿಂದ. ಯುಟ್ಯೂಬ್ ಮಹತ್ವ ಎಷ್ಟಿದೆ ಎಂದರೆ ದೊಡ್ಡ ನಟ ದರ್ಶನ್ ಅಂತವರೇ ಹಲವಾರು ಯುಟ್ಯೂಬ್ ಚಾನೆಲ್ಗಳಿಗೆ ಪ್ರತ್ಯೇಕವಾಗಿ ಸಂದರ್ಶನ ನೀಡಿ ಚಿತ್ರ ಪ್ರಚಾರವನ್ನು ಮಾಡಿದ್ದರು. ದರ್ಶನ್ ಮಾತ್ರವಲ್ಲದೇ ಉಳಿದ ಎಲ್ಲಾ ಇಂಡಸ್ಟ್ರಿಯ ನಟರೂ ಸಹ ಯುಟ್ಯೂಬ್ ಮಹತ್ವ ಅರಿತಿದ್ದು, ಪ್ರೆಸ್ಮೀಟ್ಗಳಲ್ಲಿ ಯುಟ್ಯೂಬ್ ಚಾನೆಲ್ಗಳಿಗೆ ಮಾಹಿತಿಗಳನ್ನು ನೀಡುತ್ತಾ ಇರುತ್ತಾರೆ.
ಇಷ್ಟರ ಮಟ್ಟಿಗೆ ಪ್ರಾಮುಖ್ಯತೆ ಪಡೆದುಕೊಂಡಿರುವ ಯುಟ್ಯೂಬ್ ವಿಚಾರವಾಗಿಯೂ ಸಹ ಫ್ಯಾನ್ವಾರ್ ನಡೆಯುವುದು ಕಾಮನ್. ಯಾವ ನಟನ ವಿಡಿಯೊಗಳು ಈ ವೇದಿಕೆಯಲ್ಲಿ ಹೆಚ್ಚು ವೀಕ್ಷಣೆಯನ್ನು ಪಡೆದುಕೊಳ್ಳಲಿವೆಯೋ ಆ ನಟನಿಗೆ ಹೆಚ್ಚು ಕ್ರೇಜ್ ಇದೆ ಎಂದು ಅಭಿಮಾನಿಗಳು ಮೀಮ್ಸ್ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನು ಯುಟ್ಯೂಬ್ನಲ್ಲಿ ಇದುವರೆಗೂ ಯಾವ ನಟನ ಹೆಸರನ್ನು ವಿಡಿಯೊಗಳಲ್ಲಿ ಅತಿಹೆಚ್ಚು ಬಾರಿ ಟ್ಯಾಗ್ ಆಗಿ ಬಳಸಲಾಗಿದೆ ಎಂಬ ಪಟ್ಟಿ ಇದೀಗ ಬಿಡುಗಡೆಗೊಂಡಿದ್ದು, ಕನ್ನಡದ ಇಬ್ಬರು ನಟರು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
ಹೌದು, ಯುಟ್ಯೂಬ್ನಲ್ಲಿ ವಿಡಿಯೊ ಅಪ್ಲೋಡ್ ಮಾಡುವಾಗ ಟ್ಯಾಗ್ಗಳಲ್ಲಿ ನಟರ ಹೆಸರುಗಳನ್ನು ಬಳಸಲಾಗುತ್ತದೆ. ಹೀಗೆ ವಿಡಿಯೊದಲ್ಲಿ ಹೆಸರು ಬಳಸುವುದು ಹುಡುಕಿದಾಗ ವಿಡಿಯೊ ಲಭಿಸಲಿ ಎನ್ನುವ ಕಾರಣದಿಂದ. ಹಾಗಿದ್ದರೆ ಯಾವ ನಟರ ಹೆಸರನ್ನು ಹೆಚ್ಚು ಬಾರಿ ಯುಟ್ಯೂಬ್ನಲ್ಲಿ ಟ್ಯಾಗ್ಗಳಲ್ಲಿ ಬಳಸಲಾಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ.
1. ವಿಜಯ್ - 7.9 ಲಕ್ಷಗಳು
2. ಅಲ್ಲು ಅರ್ಜುನ್ - 6.1 ಲಕ್ಷಗಳು
3. ಪವನ್ ಕಲ್ಯಾಣ್ - 5.1 ಲಕ್ಷಗಳು
4. ಯಶ್ - 4.7 ಲಕ್ಷಗಳು
5. ಧನುಷ್ - 3.9 ಲಕ್ಷಗಳು
6. ಪ್ರಭಾಸ್ - 2.9 ಲಕ್ಷಗಳು
7. ರಾಮ್ ಚರಣ್ - 2.7 ಲಕ್ಷಗಳು
8. ದರ್ಶನ್ - 2.4 ಲಕ್ಷಗಳು
9. ಅಜಿತ್ ಕುಮಾರ್ - 2.3 ಲಕ್ಷಗಳು
10.ಮಹೇಶ್ ಬಾಬು - 2.1 ಲಕ್ಷಗಳು
ಹೀಗೆ ಮೇಲ್ಕಂಡಷ್ಟು ಬಾರಿ ಆ ನಟರನ್ನು ಯುಟ್ಯೂಬ್ ಟ್ಯಾಗ್ಗಳಲ್ಲಿ ಬಳಸಲಾಗಿದ್ದು, ತಮಿಳಿನ ನಟ ವಿಜಯ್ ಅತಿಹೆಚ್ಚು ಬಾರಿ ಟ್ಯಾಗ್ ಆದ ನಟ ಎನಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಇನ್ನು ಕನ್ನಡದ ಇಬ್ಬರು ನಟರು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ನಾಲ್ಕನೇ ಸ್ಥಾನದಲ್ಲಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟನೇ ಸ್ಥಾನದಲ್ಲಿದ್ದಾರೆ.