ಕುಂದಾಪುರ: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಗ್ರಾ.ಪಂ. ಸದಸ್ಯೆ ಸಾವು

ಕುಂದಾಪುರ: ಹೆಮ್ಮಾಡಿ ಸಮೀಪದ ಕನ್ನಡಕುದ್ರು – ಮೂವತ್ತುಮುಡಿ ಬಳಿಯ ಹೆದ್ದಾರಿಯಲ್ಲಿ ರಿಕ್ಷಾ ಹಾಗೂ ಪಿಕಪ್ ನಡುವಿನ ಅಪಘಾತದಲ್ಲಿ ಗಾಯಾಳುವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಹೆಮ್ಮಾಡಿ ಗ್ರಾ.ಪಂ. ಸದಸ್ಯೆ ಕುಸುಮಾ (48) ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.
ರಸ್ತೆ ಅಪಘಾತದಲ್ಲಿ ಸೊಂಟ, ಬೆನ್ನಿಗೆ, ಮೈಕೈಗೆ ಗಂಭೀರ ಗಾಯಗೊಂಡಿದ್ದ ಕುಸುಮಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ. 26ರಂದು ಸಾವನ್ನಪ್ಪಿದ್ದಾರೆ. ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಹೆಮ್ಮಾಡಿ ಗ್ರಾ.ಪಂ.ನ ಎರಡನೇ ವಾರ್ಡ್ ಆಗಿರುವ ಸಂತೋಷ್‌ನಗರ ಭಾಗದ ಸದಸ್ಯೆಯಾಗಿದ್ದರು.
ಫೆ. 25ರ ಸಂಜೆ 4 ಗಂಟೆಯ ಸುಮಾರಿಗೆ ತ್ರಾಸಿ ಕಡೆಯಿಂದ ಕುಂದಾಪುರ ಹೆದ್ದಾರಿಯ ಕನ್ನಡಕುದ್ರು ಬಳಿ ಆಟೋ ರಿಕ್ಷಾಗೆ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ದರ್ಶನ್ ಚಲಾಯಿಸುತ್ತಿದ್ದ ಪಿಕಪ್ ವಾಹನ ಢಿಕ್ಕಿಯಾಗಿದೆ. ಘಟನೆಯಲ್ಲಿ ರಿಕ್ಷಾ ಚಾಲಕ ನಾರಾಯಣ, ಪ್ರಯಾಣಿಸುತ್ತಿದ್ದ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದರು. ಇವರೊಂದಿಗಿದ್ದ ಪತಿ ಚಂದ್ರಶೇಖರ ಮೆಂಡನ್, ಮಕ್ಕಳಾದ ಚಿರಾಗ್ (17) ಹಾಗೂ ಜಾಹ್ನವಿ (15) ಗಾಯಗೊಂಡಿದ್ದರು. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.