ಹಣ ಮಾಡಲೆಂದು ಹಣ್ಣುಗಳನ್ನು ಕದ್ದ ಖದೀಮ; ವ್ಯಾಪಾರಕ್ಕೆ ಬಳಸಿದ ಆಟೋ ಕೂಡಾ ಕಳ್ಳತನದ್ದೇ!

ಹಣ ಮಾಡಲೆಂದು ಹಣ್ಣುಗಳನ್ನು ಕದ್ದ ಖದೀಮ; ವ್ಯಾಪಾರಕ್ಕೆ ಬಳಸಿದ ಆಟೋ ಕೂಡಾ ಕಳ್ಳತನದ್ದೇ!

ಬೆಂಗಳೂರು: ಕೈಯ್ಯಲ್ಲಿ ಸ್ವಲ್ಪವೂ ದುಡ್ಡಿಲ್ಲ. ಆದರೆ ವ್ಯಾಪಾರ ಮಾಡಿ ಹಣ ಮಾಡಬೇಕೆಂಬ ಸಾಹಸ. ಇದಕ್ಕಾಗಿ ಈತ ಮಾಡಿದ್ದು ಮಾತ್ರ ಕಳ್ಳತನ. ಆರೋಪಿ ಅಝರ್​ಗೆ ಹಣ್ಣಿನ ವ್ಯಾಪಾರದ ಯೋಚನೆ ಹೊಳೆದಿದೆ. ಬಂಡವಾಳ ಹೂಡಲು ಹಣ ಇಲ್ಲದ ಕಾರಣ ಹಣ್ಣುಗಳನ್ನು ಕದ್ದು ಮಾರಾಟ ಮಾಡಿದ್ದಾನೆ.

ಅಷ್ಟೇ ಅಲ್ಲಾ, ಮಾರಾಟಕ್ಕೆ ಹಣ್ಣುಗಳನ್ನು ಜೋಡಿಸಿಡಲು ಆಟೋ ರಿಕ್ಷಾ ಕದ್ದಿದ್ದಾನೆ. ಇದೀಗ ಕಳ್ಳನನ್ನು ಪತ್ತೆ ಹಚ್ಚಿ ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅಝರ್ ಡಿ.ಜೆ.ಹಳ್ಳಿ ನಿವಾಸಿ. ರಾತ್ರಿ ವೇಳೆ ಹಣ್ಣುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಮೊಹಮ್ಮದ್ ನೌಷಾದ್ ಎಂಬುವವರ ತಳ್ಳುವ ಗಾಡಿಯಲ್ಲಿದ್ದ 5 ಬಾಕ್ಸ್​ ಸೇಬು ಹಾಗೂ 3 ಚೀಲ ಮೂಸಂಬಿ ಹಣ್ಣು ಅಪಹರಿಸಿದ್ದಾನೆ. ಈ ವೇಳೆ ಮಾರಾಟಕ್ಕೆ ಸಹಾಯವಾಗಲು ರಾಮಮೂರ್ತಿನಗರದಲ್ಲಿ ಮಾನಪ್ಪ ಎಂಬುವವರ ಆಪೆ ಆಟೋ ಕದ್ದಿದ್ದಾನೆ.

ಆರೋಪಿ ಅಝರ್ 8 ಸಾವಿರ ರೂ. ಮೌಲ್ಯದ ಹಣ್ಣುಗಳನ್ನು ಕಳ್ಳತನ ನಡೆಸಿದ್ದು, ರಸ್ತೆ ಬದಿ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಯಶವಂತಪುರ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.