ಮೈಸೂರು ವಿ.ವಿ ಘಟಿಕೋತ್ಸವ: ಪದ್ಮನಾಭನ್, ಪ್ರಶಾಂತ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್

ಮೈಸೂರು ವಿ.ವಿ ಘಟಿಕೋತ್ಸವ: ಪದ್ಮನಾಭನ್, ಪ್ರಶಾಂತ್ ಪ್ರಕಾಶ್‌ಗೆ ಗೌರವ ಡಾಕ್ಟರೇಟ್

ಮೈಸೂರು: ಮೈಸೂರು ವಿಶ್ವವಿದ್ಯಾಲಯದ 101ನೇ ವರ್ಷದ ಘಟಿಕೋತ್ಸವದಲ್ಲಿ ಅತಿ ಹೆಚ್ಚು ಪದಕ ಮತ್ತು ನಗದು ಬಹುಮಾನಕ್ಕೆ ಭಾಜನರಾಗಿರುವ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿಯ 30 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು

ಮಂಗಳವಾರ ಇಲ್ಲಿನ ಕ್ರಾಫರ್ಡ್‌ ಭವನದಲ್ಲಿ ಆಯೋಜಿಸಿದ್ದ 101ನೇ ಘಟಿಕೋತ್ಸವದಲ್ಲಿ ಕುಲಾಧಿಪತಿಯೂ ಆಗಿರುವ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಪದವಿ ಪ್ರದಾನ ಮಾಡಿ ಗೌರವಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಬಯೊಕೆಮಿಸ್ಟ್ರಿ ವಿಭಾಗದ ಗೌರವ ಪ್ರಾಧ್ಯಾಪಕ ಗೋವಿಂದರಾಜನ್‌ ಪದ್ಮನಾಭನ್‌ ಹಾಗೂ ಆಕ್ಸೆಲ್ ಇಂಡಿಯಾ ಸಂಸ್ಥಾಪಕ ಪಾಲುದಾರ ಪ್ರಶಾಂತ್‌ ಪ್ರಕಾಶ್‌ ಅವರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದರು.

ಎಂ.ಎಸ್ಸಿ ರಸಾಯನ ವಿಜ್ಞಾನ ವಿದ್ಯಾರ್ಥಿನಿ ಚೈತ್ರಾ ನಾರಾಯಣ ಹೆಗಡೆ ಅವರಿಗೆ 20 ಸ್ವರ್ಣ ಪದಕ ಹಾಗೂ ನಾಲ್ಕು ದತ್ತಿ ಬಹುಮಾನ ಪ್ರದಾನ ಮಾಡಲಾಯಿತು. ಅವರು ಈ ಬಾರಿ ಅತಿಹೆಚ್ಚಿನ ಪದಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. .

ಒಟ್ಟು 29,852 ಅಭ್ಯರ್ಥಿಗಳಿಗೆ ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುತ್ತಿದೆ. 216 ಅಭ್ಯರ್ಥಿಗಳಿಗೆ ಒಟ್ಟು 387 ಸ್ವರ್ಣಪದಕ, 178 ದತ್ತಿ ಬಹುಮಾನ ನೀಡಿ ಗೌರವಿಸಲಾಗುತ್ತಿದೆ. 244 ಅಭ್ಯರ್ಥಿಗಳಿಗೆ ಪಿಎಚ್‌.ಡಿ ಪದವಿ ವಿತರಿಸಲಾಗುತ್ತಿದೆ.

ಕೋವಿಡ್‌-19 ಕಾರಣ ಮುಂಜಾಗ್ರತಾ ಕ್ರಮ ವಹಿಸಲಾಗಿತ್ತು. ಅಂತರ ಕಾಯ್ದುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿತ್ತು. ಆದರೂ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಜನ ಸೇರಿದ್ದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ನವದೆಹಲಿಯ ಡಿಎಸ್‌ಐಆರ್‌ ಕಾರ್ಯದರ್ಶಿ ಹಾಗೂ ಸಿಎಸ್‌ಐಆ‌ರ್‌ ಮಹಾನಿರ್ದೇಶಕ ಪ್ರೊ.ಶೇಖರ್‌ ಸಿ.ಮಂಡೆ, ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌, ಕುಲಸಚಿವ (ಆಡಳಿತ), ಪರೀಕ್ಷಾಂಗ ಕುಲಸಚಿವ ಪ್ರೊ.ಆರ್.ಶಿವಪ್ಪ, ಪ್ರೊ.ಎ.ಪಿ.ಜ್ಞಾನ ಪ್ರಕಾಶ್ ಭಾಗವಹಿಸಿದ್ದರು.