ಬೆಳಗಾವಿ: ನಾಡಿನ ಹಿರಿಮೆಗೆ ಕನ್ನಡಿ ಹಿಡಿದ ಚಿಣ್ಣರು
ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು.
ವಿವಿಧ ಶಾಲೆ- ಕಾಲೇಜು ವಿದ್ಯಾರ್ಥಿಗಳು, ಕಲಾತಂಡದವರು ಕನ್ನಡ ನಾಡು- ನುಡಿಯ ಹಿರಿಮೆ ಬಿಂಬಿಸುವ ಗೀತೆಗಳಿಗೆ ಹೆಜ್ಜೆ ಹಾಕಿದರು. ಕಲಾವಿದರು ಕನ್ನಡಾಭಿಮಾನದ ಕವಿತೆಗಳು, ಚಿತ್ರಗೀತೆಗಳು ಹಾಗೂ ಶರಣರ ವಚನಗಳ ಮೂಲಕ ಕಾರ್ಯಕ್ರಮಕ್ಕೆ ಹೊಸ ರಂಗು ನೀಡಿದರು.
ವರನಟ ರಾಜ್ಕುಮಾರ್ ಹಾಡಿದ 'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಗೀತೆಯ ಮೂಲಕ ವೇದಿಕೆಗೆ ಲಗ್ಗೆ ಇಟ್ಟ ಮಕ್ಕಳ ದಂಡು ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿತು. ಶ್ವೇತವಸ್ತ್ರಧಾರಿಗಳಾಗಿ, ಹೆಗಲ ಮೇಲೆ ಕನ್ನಡ ಬಾವುಟದ ಪಟ್ಟಿ ಧರಿಸಿ ಬಂದ ಮಕ್ಕಳು ನೋಡುಗರ ಮನಗೆದ್ದರು. ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯಶಿವ, ಗೊಂಬೆ ಹೇಳುತೈತೆ, ಕನ್ನಡ ನಾಡಿನ ಜೀವನದಿ... ಸೇರಿದಂತೆ ವಿವಿಧ ಗೀತೆಗಳಿಗೆ ಕುಣಿದು ಸಂಭ್ರಮಿಸಿದರು.
ಕೃಷ್ಣಾ ಸಂಕೋಜಿ ಮತ್ತು ತಂಡ ನೃತ್ಯರೂಪಕ ವಿಶೇಷವಾಗಿ ಮೂಡಿಬಂತು. ಶ್ರೀಮಂತ ಪಾಟೀಲ ಅವರ 'ಬೆಳಗಾವಿ ನಮ್ಮ ಬೆಳಗಾವಿ' ಹಾಡುಗಳು ಕುಮಾರ ಬಡಿಗೇರ ಮತ್ತು ತಂಡದವರಿಂದ ಕೇಳಿಬಂದವು. ಇದಕ್ಕೂ ಮುನ್ನ ಮಹಾಂತೇಶ ನಗರದ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಸಮೂಹ ಗೀತೆ ಚಪ್ಪಾಳೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಕುವೆಂಪು ನಗರದ ಕೆಎಲ್ಇ ಇಂಟರ್ನ್ಯಾಷನಲ್ ಶಾಲೆ, ಮಹಾಂತೇಶ ನಗರದ ಲಿಟಲ್ ಸ್ಕ್ವಾಲರ್ ಶಾಲೆ, ಲವ್ಡೇಲ್ ಪ್ರೌಢಶಾಲೆ, ಪೋದ್ದಾರ ಇಂಟರ್ನ್ಯಾಷನಲ್ ಶಾಲೆ, ಕೆ.ಎಲ್.ಎಸ್. ಪ್ರೌಢಶಾಲೆ, ಸರ್ದಾರ ಸರ್ಕಾರಿ ಪ್ರೌಢಶಾಲೆ, ಶೇಷಗಿರಿ ಆಂಗ್ಲಮಾಧ್ಯಮ ಶಾಲೆ ಚಿಣ್ಣರ ತಂಡಗಳು ಹಾಡಿ, ಕುಣಿದು ಖುಷಿ ಹಂಚಿದವು.
ಯಕ್ಷಗಾನದ ವೇಷ ಧರಿಸಿದವರು, ಆನೆದಂತದ ಮಾದರಿಗಳನ್ನು ಹಿಡಿದವರು, ಕಾವೇರಮ್ಮ ವೇಷಧಾರಿಗಳು ಒಬ್ಬರಿಗಿಂತ ಒಬ್ಬರು ಸೈ ಅನ್ನಿಸಿಕೊಂಡರು. ನಾಡಿನ ಗತವೈಭವ ಸಾರುವ ರೂಪಕಗಳು ಕಣ್ಮನ ಸೆಳೆದವು.
ಉದ್ಘಾಟನೆ: ಇದಕ್ಕೂ ಮುನ್ನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಾಂಸ್ಕೃತಿಕ ಸಂಭ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಪಾಲಿಕೆ ಆಯುಕ್ತ ಡಾ.ರುದ್ರೇಶ ಘಾಳಿ, ಉಪ ಆಯುಕ್ತೆ ಭಾಗ್ಯಶ್ರೀ ಹುಗ್ಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಪಾಲಿಕೆ ಸದಸ್ಯರಾದ ಹಣಮಂತ ಕೊಂಗಾಲಿ, ವೀಣಾ ವಿಜಾಪುರೆ, ರೇಖಾ ಹೂಗಾರ್, ರಾಥೋಡ, ಸವಿತಾ ಕಾಂಬಳೆ ವೇದಿಕೆ ಮೇಲಿದ್ದರು.