ಸಾಮೂಹಿಕ ಅತ್ಯಾಚಾರ ; ದುಷ್ಕರ್ಮಿಗಳಿಂದ ಮೂರು ಲಕ್ಷ ರೂಪಾಯಿ ಬೇಡಿಕೆ ; ಮೂವರ ಬಂಧನ

ಸಾಮೂಹಿಕ ಅತ್ಯಾಚಾರ ; ದುಷ್ಕರ್ಮಿಗಳಿಂದ ಮೂರು ಲಕ್ಷ ರೂಪಾಯಿ ಬೇಡಿಕೆ ; ಮೂವರ ಬಂಧನ

ಮೈಸೂರು: ಎಂಬಿಎ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದೆ. ಘಟನಾ ಸ್ಥಳ ಪರಿಶೀಲನೆ ಮಾಡಲು ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಆಗಮಿಸಿದ್ದಾರೆ.
ಲಲಿತಾದ್ರಿಪುರಂ ರಸ್ತೆಯ ನಿರ್ಜನ ಪ್ರದೇಶದಲ್ಲಿ 6 ಮಂದಿ ಕಿರಾತಕರು ಮಂಗಳವಾರ ಸಂಜೆ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಸಂಬಂಧ ಆಗಮಿಸಿರುವ ಎಡಿಜಿಪಿ ಪ್ರತಾಪ್ ರೆಡ್ಡಿ ಅವರಿಗೆ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾಹಿತಿ ನೀಡುತ್ತಿದ್ದಾರೆ.
ವಿದ್ಯಾರ್ಥಿನಿಯನ್ನು ರೇಪ್​ ಮಾಡಿದ ಕಾಮುಕರು ಆಕೆಯ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಮತ್ತೊಂದು ಅಂಶ ಬೆಳಕಿಗೆ ಬಂದಿದೆ. ಸುಮಾರು 3 ಲಕ್ಷ ರೂಪಾಯಿ ಹಣಕ್ಕೆ ಡಿಮ್ಯಾಂಡ್​ ಮಾಡಿದ್ದರು. ಇದಕ್ಕೆ ಸಂತ್ರಸ್ಥೆ ಹಾಗೂ ಆಕೆಯ ಗೆಳೆಯ ಕೂಡ ಒಪ್ಪಿದ್ದರು. ಆದರೆ ಹಣ ಕೇಳಿ 2 ಗಂಟೆಯಾದರೂ ಸಂತ್ರಸ್ಥೆ ಹಣ ಕೊಡಲು ಸಾಧ್ಯವಾಗದಿದ್ದಾಗ, ಕಾಮುಕರು ಆಕೆಯ ಸ್ನೇಹಿತನ ಮೇಲೆ ಹಲ್ಲೆ ಮಾಡಿದ್ದಾರೆ. ಜೊತೆಗೆ ಕಲ್ಲಿನಿಂದ ಹೊಡೆದು ಇಬ್ಬರ ಮೊಬೈಲ್​​ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸ್​ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.ಇನ್ನು, ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಕಾಮುಕರು ದೂರು ಕೊಡದಂತೆ ಆಕೆಗೆ ಬೆದರಿಕೆ ಹಾಕಿದ್ದರು ಎನ್ನಲಾಗುತ್ತಿದೆ. ರೇಪ್​ ಮಾಡಿ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು, ಪೊಲೀಸರಿಗೆ ದೂರು ಕೊಟ್ಟರೆ ರೇಪ್​ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ. ಈ ಕುರಿತು ಪೋಲೀಸರು ಬುಧವಾರ ಮೂವರು ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.