ಪ್ರಯಾಣಿಕರೇ ಗಮನಿಸಿ: ರೈಲು ನಿಲ್ದಾಣ ತಲುಪುವ ಮುನ್ನ ಒಮ್ಮೆ ಪರಿಶೀಲಿಸಿ

ಪ್ರಯಾಣಿಕರೇ ಗಮನಿಸಿ: ರೈಲು ನಿಲ್ದಾಣ ತಲುಪುವ ಮುನ್ನ ಒಮ್ಮೆ ಪರಿಶೀಲಿಸಿ

ವದೆಹಲಿ, ನ. 11: ಭಾರತೀಯ ರೈಲ್ವೇ ಶುಕ್ರವಾರ 223 ರೈಲುಗಳನ್ನು ರದ್ದುಗೊಳಿಸಿದೆ. ಅವುಗಳಲ್ಲಿ 163 ಸಂಪೂರ್ಣವಾಗಿ ರದ್ದುಗೊಳಿಸಲಾಗಿದ್ದು ಉಳಿದ ರೈಲುಗಳನ್ನು ವಿವಿಧ ಕಾರಣಗಳಿಂದ ಭಾಗಶಃ ರದ್ದುಗೊಳಿಸಲಾಗಿದೆ.

ಭಾರತೀಯ ರೈಲ್ವೆಯ ಹಲವಾರು ರೈಲ್ವೆ ವಲಯಗಳಲ್ಲಿ ಟ್ರ್ಯಾಕ್ ನಿರ್ವಹಣೆ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಒಳಗೊಂಡಿರುವ ವಿವಿಧ ಕಾರಣಗಳಿಂದಾಗಿ ಭಾರತೀಯ ರೈಲ್ವೇಯು ಪ್ಯಾಸೆಂಜರ್ ರೈಲುಗಳ ಸೇವೆಯನ್ನು ರದ್ದುಗೊಳಿಸಿದೆ.

ಇದರ ವಿವರಗಳನ್ನು ರೈಲ್ವೇ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು.

ಹೀಗಾಗಿ ಈಗಾಗಲೇ ಟಿಕೆಟ್ ಬುಕ್ ಮಾಡಿರುವವರು ಅಥವಾ ಬೇರೆ ಊರಿಗಳಿಗೆ ಹೋಗಲು ರೈಲು ಸೇವೆ ಬಳಸುವವರು ಒಮ್ಮೆ ತಮ್ಮ ರೈಲುಗಳು ಇಂದು ಪ್ರಯಾಣಕ್ಕೆ ಸಿಗಲಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.

ಇನ್ನು ಬೆಂಗಳೂರಿಗೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಆಗಮಿಸಿರುವ ಹಿನ್ನೆಲೆಯಲ್ಲಿಯು ರೈಲು ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ. ಭದ್ರತಾ ದೃಷ್ಟಿಯಿಂದ ಕೆಲವು ರೈಲುಗಳನ್ನು ರದ್ದುಗೊಳಿಸಿದ್ದು, ಮತ್ತಷ್ಟು ರೈಲುಗಳನ್ನು ಮಾರ್ಗ ಬದಲಾವಣೆ ಮಾಡಲಾಗಿದೆ.

ಇದರಲ್ಲಿ ಮೆಮೂ ಮತ್ತು ಡೆಮೊ ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. 01765 SBC-WFD ಯುಆರ್ ಮೆಮು ಎಕ್ಸ್‌ಪ್ರೆಸ್ ಭಾಗಶಃ ರದ್ದಾಗಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ - ವೈಟ್‌ಫೀಲ್ಡ್ ತೆರಳಬೇಕಿತ್ತು.

ಬಂಗಾರಪೇಟೆ ಮತ್ತು ಬೆಂಗಳೂರಿನ ನಡುವೆ ಪ್ರಯಾಣಿಸುವ ಮೈಸೂರು ಮೆಮೋ ರೈಲು, ಬೆಂಗಳೂರು - ತುಮಕೂರು ನಡುವಿನ ಮೆಮೋ ರೈಲು ಭಾಗಶಃ ರದ್ದಾಗಿದೆ. ಬೆಂಗಳೂರು - ಹಾಸನ ನಡುವಿನ ಡೆಮೋ ರೈಲು ಭಾಗಶಃ ರದ್ದಾಗಿದೆ.

ಇನ್ನು, ಅಕ್ಟೋಬರ್ 2022 ರವರೆಗೆ 2022-23 ಹಣಕಾಸು ವರ್ಷದಲ್ಲಿ 1,223 ಕಿಮೀ ವಿದ್ಯುದ್ದೀಕರಣವನ್ನು ರೈಲ್ವೆ ಸಾಧಿಸಿದೆ. "ಭಾರತೀಯ ರೈಲ್ವೇ ತನ್ನ ಸಂಪೂರ್ಣ ಬ್ರಾಡ್ ಗೇಜ್ ನೆಟ್‌ವರ್ಕ್‌ನ ವಿದ್ಯುದ್ದೀಕರಣದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿದೆ. ಇದು ಉತ್ತಮ ಇಂಧನ ಶಕ್ತಿಯ ಬಳಕೆಗೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ ಹೆಚ್ಚಿದ ಥ್ರೋಪುಟ್, ಕಡಿಮೆ ಇಂಧನ ವೆಚ್ಚ ಮತ್ತು ಅಮೂಲ್ಯವಾದ ವಿದೇಶಿ ವಿನಿಮಯದಲ್ಲಿ ಉಳಿತಾಯವಾಗುತ್ತದೆ" ಎಂದು ಸಚಿವಾಲಯ ಹೇಳಿದೆ.

ಈ ಹಿಂದೆ, 2020-21ರಲ್ಲಿ 6,015 ಕಿಮೀ ವಿದ್ಯುದ್ದೀಕರಣವಾಗಿತ್ತು.