ಶಾಲೆಯಲ್ಲೇ 2ನೇ ಮದ್ವೆಯಾದ ಹೆಡ್ ಮಾಸ್ಟರ್ಗೆ ಮರುಕ್ಷಣವೇ ಮೊದಲ ಪತ್ನಿಯಿಂದ ಬಿಗ್ ಶಾಕ್!

ಭುವನೇಶ್ವರ್: ಮೊದಲ ಪತ್ನಿಯ ಜತೆಗಿನ ಡಿವೋರ್ಸ್ ಕೇಸ್ ಇತ್ಯರ್ಥವಾಗುವ ಮುನ್ನವೇ ಶಾಲೆಯಲ್ಲೇ ಎರಡನೇ ವಿವಾಹದ ಹೆಡ್ ಮಾಸ್ಟರ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯ ದರಿಗಿನಿಬಾದಿ ಬ್ಲಾಕ್ ಅಡಿಯಲ್ಲಿ ಬರುವ ಸುಜಮಾಜು ಹೈಸ್ಕೂಲ್ನಲ್ಲಿ ನಡೆದಿದೆ.
ಶಾಲೆಯ ಆವರಣದಲ್ಲಿ ಸಹ ಶಿಕ್ಷಕರ ಸಮ್ಮುಖದಲ್ಲಿ ಹೆಡ್ ಮಾಸ್ಟರ್ ಮದುವೆಯಾದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಹೆಡ್ಮಾಸ್ಟರ್ ಅನ್ನು ಶ್ರೀಪಾಠಿ ನಾಯಕ್ ಎಂದು ಗುರುತಿಸಲಾಗಿದೆ. ಶಾಲೆಯ ಸ್ಟೋರ್ ರೂಮ್ನಲ್ಲಿ ಸಹ ಶಿಕ್ಷಕರ ಉಪಸ್ಥಿತಿಯಲ್ಲಿ ಮತ್ತೊಂದು ಮಹಿಳೆಯ ಜೊತೆ ಹಾರ ಬದಲಾವಣೆ ಮಾಡಿಕೊಂಡು, ಕೇಕ್ ಕತ್ತರಿಸುತ್ತಿರುವ ದೃಶ್ಯ ಫೋಟೋದಲ್ಲಿದೆ.
ಫೋಟೋ ವೈರಲ್ ಆಗುತ್ತಿದ್ದಂತೆ ಅದು ಮೊದಲ ಪತ್ನಿ ನಿರುಪಮಾ ದಕುವಾ ಅವರ ಗಮನಕ್ಕೆ ಬಂದಿದ್ದು, ಅವರು ತಕ್ಷಣ ಬಲಿಗುಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಿವೋರ್ಸ್ ಪ್ರಕರಣ ಇನ್ನೂ ಇತ್ಯರ್ಥವಾಗದಿರುವಾಗ ಶಾಲೆಯ ಆವರಣದಲ್ಲಿ ಹೆಡ್ ಮಾಸ್ಟರ್ ಒಬ್ಬರು ಮರು ಮದುವೆಯಾಗವುದೆಂದರೆ ಏನು ಅರ್ಥ ಎಂಬ ಪ್ರಶ್ನೆ ಕೇಳಿಬಂದಿದೆ. ಮೂಲಗಳ ಪ್ರಕಾರ ನಾಯಕ್ ಮತ್ತು ನಿರುಪಮಾ 2003ರಲ್ಲಿ ಮದುವೆಯಾದರು. ದಂಪತಿಗೆ 12 ವರ್ಷದ ಹಣ್ಣು ಮಗಳಿದ್ದಾಳೆ.
ಸುಜಮಾಜು ಹೈಸ್ಕೂಲ್ನಲ್ಲಿ ಹೆಡ್ ಮಾಸ್ಟರ್ ಆಗಿರುವ ಶ್ರೀಪಾಠಿ ನಾಯಕ್ ನನ್ನ ಪತಿ. ಕಳೆದ 7 ವರ್ಷಗಳಿಂದ ಆತ ನನಗೆ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ನೀಡಿದ್ದಾರೆ. ಕೌಟುಂಬಿಕ ನ್ಯಾಯಾಲಯದಲ್ಲಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿ, ಆ ನಂತರ ಅದನ್ನು ಹಿಂಪಡೆದುಕೊಂಡಿದ್ದಾರೆ ಎಂದು ನಿರುಪಮಾ ಹೇಳಿದ್ದಾರೆ.
ಫೆ. 6ರಂದು ನನ್ನ ಪತಿ ಬೇರೊಂದು ಮಹಿಳೆಯ ಜೊತೆ ಮರುವಿವಾಹವಾಗಿದ್ದಾರೆ ಮತ್ತು ಶಾಲೆಯ ಸ್ಟೋರ್ ರೂಮ್ನಲ್ಲಿ ಆಕೆಯಿಂದ ವಾಸವಿದ್ದಾರೆ ಎಂದು ನಿರುಪಮಾ ಆರೋಪ ಮಾಡಿದ್ದಾರೆ. ಆದರೆ, ಆರೋಪವನ್ನು ನಾಯಕ್ ತಿರಸ್ಕರಿಸಿದ್ದಾರೆ. ನನ್ನ ಹುಟ್ಟುಹಬ್ಬದ ಆಚರಣೆ ವೇಳೆ ತೆಗೆದ ಫೋಟೋ ಅದು ಎಂದು ಸ್ಪಷ್ಟನೆ ನೀಡಿದ್ದಾರೆ.
ನನ್ನ ಮೇಲಿನ ಆರೋಪಗಳೆಲ್ಲ ಆಧಾರರಹಿತ. ನಾನು ಈಗಾಗಲೇ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದೇನೆ. ಪ್ರಕರಣ ಇನ್ನೂ ಕೋರ್ಟ್ನಲ್ಲಿ ಇತ್ಯರ್ಥವಾಗಿಲ್ಲ. ನನ್ನ ಹುಟ್ಟುಹಬ್ಬ ಆಚರಣೆ ವೇಳೆ ತೆಗೆದ ಫೋಟೋ ವೈರಲ್ ಆಗಿದೆ. ಶಾಲೆಯ ಸಮಯದ ನಂತರ ನನ್ನ ಹುಟ್ಟುಹಬ್ಬದಂದು ನಾನು ಸಿಬ್ಬಂದಿಗೆ ಔತಣ ಕೂಟವನ್ನೂ ಏರ್ಪಡಿಸಿದ್ದೆ ಎಂದು ನಾಯಕ್ ಹೇಳಿದರು. (ಏಜೆನ್ಸೀಸ್)