ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ: ಸಚಿವ ಬಿಸಿ ನಾಗೇಶ್

ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ರಾಜಕೀಯ ಮಾಡುವುದು ಸರಿಯಲ್ಲ: ಸಚಿವ ಬಿಸಿ ನಾಗೇಶ್

ಬೆಂಗಳೂರು: ಶಾಲೆಗಳ ಶ್ರೇಯೋಭಿವೃದ್ಧಿಗೆ ಪೋಷಕರಿಂದ ಹಣ ಸಂಗ್ರಹ ವಿಚಾರವಾಗಿ ವಿರೋಧ ಪಕ್ಷಗಳ ಸಹಿತ ಸಾರ್ವಜನಿಕರಿಂದ ವ್ಯಾಪಕ ಟೀಕೆಗಳು ಕೇಳಿಬಂದ ಹಿನ್ನೆಲೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಸದಾಶಿವ ನಗರದಲ್ಲಿ ಮಾತನಾಡಿದ ಅವರು, ನನಗೆ ವಿಷಯ ಗೊತ್ತಾದ ತಕ್ಷಣ ನಾನು ಆಯುಕ್ತರನ್ನು ಈ ಬಗ್ಗೆ ಕೇಳಿದ್ದೇನೆ.

ಎಸ್‌ಡಿಎಂಸಿಗಳ ಸಲಹೆ ಮೇರೆಗೆ ಈ ಸುತ್ತೋಲೆ ತರಲಾಗಿದೆ. ಹೀಗೆ ಸುತ್ತೋಲೆ ಹೊರಡಿಸಲು ಆಯುಕ್ತರಿಗೆ ಸಂವಿಧಾನದಲ್ಲೇ ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಸುತ್ತೋಲೆಗಳನ್ನೂ ಸರ್ಕಾರದ ಗಮನಕ್ಕೆ ತಂದೇ ಹೊರಡಿಸಬೇಕು ಎಂದೇನೂ ಇಲ್ಲ. ಶಾಲೆಯ ಅಭಿವೃದ್ಧಿಗೆ ಸ್ಥಳೀಯವಾಗಿ ಹಣ ಸಂಗ್ರಹಿಸಲು ಆರ್‌ಟಿಇ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆರ್‌ಟಿಇ ಒಳ್ಳೆಯ ಕಾಯ್ದೆ, ಅದನ್ನು ಜಾರಿಗೆ ತಂದವರು ಸಿದ್ದರಾಮಯ್ಯ ಅವರ ಸರ್ಕಾರದವರು. ಎಲ್ಲಿಯೂ ಪೋಷಕರು ಕಡ್ಡಾಯವಾಗಿ ಹಣ ಕೊಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿಲ್ಲ. ಅವರಾಗಿಯೇ ಕೊಟ್ಟರೆ, ತಿಂಗಳಿಗೆ 100 ರೂಪಾಯಿವರೆಗೆ ಪಡೆದು ರಶೀದಿ ಕೊಡಬೇಕು.

ಆದರೆ, ದೇಶದಲ್ಲೇ ಕಾನೂನು ಪಂಡಿತ ಎನಿಸಿಕೊಂಡ ಸಿದ್ದರಾಮಯ್ಯ ಇದರಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದರು. ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಕೆಲವು ಕಡೆ ಶುರು ಮಾಡಲಾಗಿದೆ. ಅವರಿಗೆ ಸಂಭಾವನೆ ಕೊಡುವ ನಿಟ್ಟಿನಲ್ಲಿ ಆಯಾ ಎಸ್‌ಡಿ‌ಎಂಸಿ ತೀರ್ಮಾನ ಮಾಡುತ್ತವೆ. ಸುತ್ತೋಲೆ ದುರುಪಯೋಗವಾದರೆ ಹಿಂಪಡೆಯಲಾಗುವುದು ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದರು.