ಭಾರತ ತಂಡದಲ್ಲಿ ಆತನೊಬ್ಬ ಇದ್ದಿದ್ದರೆ ಇವರಿಬ್ಬರ ಆಟ ನಡೆಯುತ್ತಿರಲಿಲ್ಲ; ಕನೇರಿಯಾ

ಸದ್ಯ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ತುಂಬಾ ಹತ್ತಿರದಲ್ಲಿದ್ದು, 3ನೇ ದಿನದಾಟದಲ್ಲಿ ಗೆಲುವಿನ ಗಡಿ ತಲುಪಲು ಕೇವಲ 76 ರನ್‌ಗಳ ಅಗತ್ಯವಿದೆ.
ಮೊದಲ ದಿನ ಕಾಂಗರೂ ಪಡೆ 88 ರನ್‌ಗಳ ಉತ್ತಮ ಮುನ್ನಡೆ ಪಡೆದ ನಂತರ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡವನ್ನು 163 ರನ್‌ಗಳಿಗೆ ಆಲೌಟ್ ಮಾಡಿದರು. ಇದರಲ್ಲಿ 23.3 ಓವರ್‌ಗಳಲ್ಲಿ 64 ರನ್ ನೀಡಿ 8 ವಿಕೆಟ್ ಗಳಿಸಿದ ನಾಥನ್ ಲಿಯಾನ್ ಭಾರತದ ಬ್ಯಾಟಿಂಗ್ ಬಲ ಮುರಿದರು.
ಅದೇ ರೀತಿ ಮೊದಲ ಇನಿಂಗ್ಸ್‌ನಲ್ಲಿ ಮ್ಯಾಥ್ಯೂ ಕುಹ್ನೆಮನ್ 16 ರನ್‌ಗಳಿಗೆ 5 ವಿಕೆಟ್ ಗಳಿಸಿದ್ದರಿಂದ ಭಾರತ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸೀಸ್‌ನ ಈ ಇಬ್ಬರು ಸ್ಪಿನ್ನರ್‌ಗಳೆದುರು ಮಂಡಿಯೂರಿದರು.
ಸ್ಪಿನ್ ವಿರುದ್ಧ ಭಾರತದ ಬ್ಯಾಟಿಂಗ್ ವೈಫಲ್ಯದ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ ತಂಡದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ, ಇಂದೋರ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಆತ ಭಾರತ ತಂಡದಲ್ಲಿ ಇದ್ದಿದ್ದರೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ನಾಥನ್ ಲಿಯಾನ್ ಮತ್ತು ಮ್ಯಾಥ್ಯೂ ಕುಹ್ನೆಮನ್ ವಿರುದ್ಧ ಪ್ರಾಬಲ್ಯ ಸಾಧಿಸುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಿಷಭ್ ಪಂತ್ ಡಿಸೆಂಬರ್ 2022ರಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಶಸ್ತ್ರಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಭಾರತದ ಈ ವಿಕೆಟ್ ಕೀಪರ್-ಬ್ಯಾಟರ್ ಕ್ರಿಕೆಟ್ ಮೈದಾನಕ್ಕೆ ಮರಳಲು ಕನಿಷ್ಠ ಒಂದು ವರ್ಷ ಕಾಲಾವಕಾಶ ತೆಗೆದುಕೊಳ್ಳುತ್ತದೆ ಎಂದು ವರದಿಯಾಗಿದೆ.
ರಿಷಭ್ ಪಂತ್ ತನ್ನ ಆಕ್ರಮಣಕಾರಿ ವಿಧಾನ ಬಳಸಿ ಮೈದಾನದಾದ್ಯಂತ ಬಾಲ್ ಕಳಿಸುವ ಆಸೀಸ್ ಸ್ಪಿನ್ನರ್‌ಗಳಾದ ನಾಥನ್ ಲಿಯಾನ್ ಮತ್ತು ಮ್ಯಾಥ್ಯೂ ಕುಹ್ನೆಮನ್‌ರ ದಾಳಿಯನ್ನು ಸಮರ್ಥವಾಗಿ ಎದುರಿಸುತ್ತಿದ್ದರು ಎಂದು ದಾನಿಶ್ ಕನೇರಿಯಾ ತಿಳಿಸಿದರು.
"ಆಸ್ಟ್ರೇಲಿಯಾದ ಈ ಸ್ಪಿನ್ನರ್‌ಗಳ ವಿರುದ್ಧ ಹೇಗೆ ಬ್ಯಾಟ್ ಮಾಡಬೇಕೆಂದು ನೀವು ರಿಷಭ್ ಪಂತ್‌ಗೆ ಚೆನ್ನಾಗಿ ಗೊತ್ತಿದೆ. ಆತ ತಂಡದಲ್ಲಿ ಇದ್ದಿದ್ದರೆ ಎದುರಾಳಿ ಸ್ಪಿನ್ನರ್‌ಗಳಾದ ಲಿಯಾನ್ ಮತ್ತು ಕುಹ್ನೆಮನ್ ಆಟ ನಡೆಯುತ್ತಿರಲಿಲ್ಲ. ಆಕ್ರಮಣಕಾರಿ ಬ್ಯಾಟಿಂಗ್ ವಿಧಾನದಿಂದ, ಸ್ಪಿನ್ನರ್‌ಗಳು ಲೆಂಥ್ ಬೌಲಿಂಗ್ ಬದಲಾಯಿಸುವಂತೆ ಮಾಡುತ್ತಿದ್ದರು. ಆದರೆ, ಉಳಿದ ಭಾರತೀಯ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದ್ದಾರೆ," ಎಂದು ದಾನಿಶ್ ಕನೇರಿಯಾ ಹೇಳಿದ್ದಾರೆ.
ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 250-300 ರನ್ ಗಳಿಸಬಹುದಿತ್ತು
"ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬ್ಯಾಟರ್‌ಗಳು ನಿರಾಶಾದಾಯಕವಾಗಿ ಕಂಡರು. ಈ ಪಿಚ್‌ನಲ್ಲಿ ಉತ್ತಮವಾಗಿ ಆಡಿದ್ದರೆ 250ರಿಂದ 300 ರನ್‌ಗಳನ್ನು ಸುಲಭವಾಗಿ ಗಳಿಸಬಹುದಿತ್ತು. ಆದರೆ, ಅನಗತ್ಯ ಶಾಟ್‌ಗಳ ಮೂಲಕ ಆಸ್ಟ್ರೇಲಿಯಾ ಸ್ಪಿನ್ನರ್‌ಗಳು ಮೇಲುಗೈ ಸಾಧಿಸುವಂತೆ ಮಾಡಿಕೊಂಡರು. ಆಸ್ಟ್ರೇಲಿಯಾ ಈ ಪಂದ್ಯವನ್ನು ಗೆಲ್ಲಲು ಶೇ.80ರಷ್ಟು ಅವಕಾಶವಿದೆ," ಎಂದು ದಾನಿಶ್ ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಇದೇ ವೇಳೆ, ಕಳೆದ 10 ವರ್ಷಗಳಲ್ಲಿ ಭಾರತ ತಂಡವು ತವರಿನಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಸೋತಿದೆ. ಮೂರನೇ ದಿನದಲ್ಲಿ ಆಸ್ಟ್ರೇಲಿಯಾ ತಂಡ ಮೂರನೇ ಟೆಸ್ಟ್ ಪಂದ್ಯವನ್ನು ಗೆಲ್ಲಲು ಯಶಸ್ವಿಯಾದರೆ, ಅವರು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯುತ್ತಾರೆ.
ಭಾರತ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಬೆಕಾದರೆ ಪ್ರಸ್ತುತ ನಡೆಯುತ್ತಿರುವ ಸರಣಿಯಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಅದಾಗದಿದ್ದರೆ, ಭಾರತ ತಂಡವು ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ.