ಧಾರವಾಡ; ಕಾಣೆಯಾದ ರಸ್ತೆ, ಬಾವಿ ಹುಡುಕಿಕೊಡುವಂತೆ ಲೋಕಾಯುಕ್ತಕ್ಕೆ ದೂರು

ಧಾರವಾಡ; ಕಾಣೆಯಾದ ರಸ್ತೆ, ಬಾವಿ ಹುಡುಕಿಕೊಡುವಂತೆ ಲೋಕಾಯುಕ್ತಕ್ಕೆ ದೂರು

ಧಾರವಾಡ: 'ಇಲ್ಲಿಗೆ ಸಮೀಪದ ರಾಯಾಪುರ ಬಳಿಯ ಸಾರ್ವಜನಿಕ ರಸ್ತೆ ಕಾಣೆಯಾಗಿದೆ ಮತ್ತು ನಗರದ ಮರಾಠಾ ಕಾಲೊನಿಯಲ್ಲಿದ್ದ ಸಾರ್ವಜನಿಕ ಬಾವಿಯನ್ನು ಶಾಸಕ ಅರವಿಂದ ಬೆಲ್ಲದ ಅತಿಕ್ರಮಿಸಿದ್ದಾರೆ' ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಲೋಕಾಯುಕ್ತ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದಾರೆ.

'ಸರ್ವೆ ಸಂಖ್ಯೆ 25, 31 ಹಾಗೂ 32ರಲ್ಲಿ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸುವ 24 ಮೀ. ಅಗಲದ ರಸ್ತೆಯು ಅರಣ್ಯ ಇಲಾಖೆಯ ಪ್ರಾಣಿ ಸಂಗ್ರಹಾಲಯಕ್ಕೆ ಹೊಂದಿಕೊಂಡು ಸುತಗಟ್ಟಿ ಗ್ರಾಮಕ್ಕೆ ಹಾಗೂ ಅಲ್ಲಿರುವ ಪುರಾತನ ಉದ್ಭವ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಹೋಗಲು ಮತ್ತು ಸುತ್ತಮುತ್ತಲಿನ ಜಮೀನುಗಳಿಗೆ ಹೋಗಲು ಮುಖ್ಯ ಸಂಪರ್ಕ ರಸ್ತೆಯಾಗಿತ್ತು. ಆದರೆ ಈ ರಸ್ತೆಯೇ ಈಗ ಮಾಯವಾಗಿದೆ' ಎಂದಿದ್ದಾರೆ.

'ಇದು ವ್ಯವಸ್ಥಿತ ಮತ್ತು ಯಾರದ್ದೋ ಒತ್ತಡದಿಂದ ಈ ರಸ್ತೆ ಕಾಣೆಯಾಗಿದೆ. ಈ ಕುರಿತಂತೆ ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ' ಎಂದು ದೂರಿನಲ್ಲಿ ಹೇಳಿದ್ದಾರೆ.

ನಗರದ ಮರಾಠಾ ಕಾಲೊನಿಯಲ್ಲಿರುವ ಸರ್ವೆ ಸಂಖ್ಯೆ 31/1ರಲ್ಲಿದ್ದ ಸಾರ್ವಜನಿಕ ಬಾವಿಯನ್ನು ಶಾಸಕ ಅರವಿಂದ ಬೆಲ್ಲದ ಅವರು ಅತಿಕ್ರಮಿಸಿದ್ದಾರೆ. ಆದ್ದರಿಂದ ಈ ಎರಡೂ ಪ್ರಕರಣಗಳ ಕುರಿತು ತನಿಖೆ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಾಜ ಗೌರಿ ಒತ್ತಾಯಿಸಿದ್ದಾರೆ.