ಮೈಸೂರಿನಲ್ಲಿ ಚಿತ್ರನಗರಿ; ಸಿ.ಎಂಗೆ ಮನವಿ

ಮೈಸೂರಿನಲ್ಲಿ ಚಿತ್ರನಗರಿ; ಸಿ.ಎಂಗೆ ಮನವಿ

ಬೆಂಗಳೂರು: ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣ ವಿಚಾರವಾಗಿ ನಿರ್ದೇಶಕ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಗುರುವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

'ಚಿತ್ರನಗರಿ ನಿರ್ಮಾಣದಿಂದ ಈ ಪ್ರದೇಶದ ಜನರಿಗೆ ಉದ್ಯೋಗ ದೊರೆತು ಸುಮಾರು 25 ಸಾವಿರ ಕುಟುಂಬಗಳಿಗೆ ಜೀವನೋಪಾಯವಾಗಲಿದೆ.

ಚಿತ್ರನಗರಿ ಕಟ್ಟುವಲ್ಲಿ ಏನೇ ಸಹಕಾರ ಬೇಕಾದರೂ ನಾವು ಸಿದ್ಧ. ಈ ಹಿನ್ನೆಲೆಯಲ್ಲಿ ಚಿತ್ರನಗರಿಯ ಕಾರ್ಯವನ್ನು ಶೀಘ್ರವೇ ಪ್ರಾರಂಭಿಸಬೇಕು' ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

'ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಮನವಿಪತ್ರಕ್ಕೆ ಶಿವರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ನಾಗತಿಹಳ್ಳಿ ಚಂದ್ರಶೇಖರ್, ಪಿ.ಶೇಷಾದ್ರಿ ಸೇರಿದಂತೆ ಇಪ್ತತ್ತಕ್ಕೂ ಅಧಿಕ ಗಣ್ಯರು ಸಹಿ ಮಾಡಿದ್ದಾರೆ. ಬಾಲಿವುಡ್‌ನ ಖ್ಯಾತ ನಟರಾದ ಧರ್ಮೇಂದ್ರ, ಹೇಮಾಮಾಲಿನಿ ಅವರೂ ಈ ಕುರಿತು ಸಹಿ‌ ಮಾಡಿ, ಪತ್ರವೊಂದನ್ನು ಕಳುಹಿಸಿದ್ದಾರೆ‌. ಧರ್ಮೇಂದ್ರ ಅವರಿಗೂ ಮೈಸೂರು ಅಚ್ಚುಮೆಚ್ಚು. ಏಕೆಂದರೆ ಅವರ ವೃತ್ತಿಜೀವನ ಆರಂಭವಾಗಿದ್ದೇ ಮೈಸೂರಿನ ಪ್ರೀಮಿಯರ್ ಸ್ಟುಡಿಯೊ ದಲ್ಲಿ' ಎಂದಿದ್ದಾರೆ ರಾಜೇಂದ್ರ ಸಿಂಗ್ ಬಾಬು.