ನಿಮ್ಮನ್ನು ನೋಡ್ಬೇಕು ಬನ್ನಿ ಎಂದು ಗೋಗರೆದರೂ ಹಾಸ್ಟೆಲ್ಗೆ ಬಾರದ ಅಪ್ಪ-ಅಮ್ಮ. ಬೆಂಗಳೂರಲ್ಲಿ ಬಿಇ ವಿದ್ಯಾರ್ಥಿ ದುರಂತ ಅಂತ್ಯ

ಬೆಂಗಳೂರು: ಬನ್ನೇರುಘಟ್ಟ ಸಮೀಪದ ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನ ಶವ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ಹಾಸ್ಟೆಲ್ನಲ್ಲಿ ಪತ್ತೆಯಾಗಿದ್ದು, ತಂದೆ-ತಾಯಿ ಬರಲಿಲ್ಲ ಎಂಬ ವಿಚಾರವೇ ಸಾವಿಗೆ ಕಾರಣವಾಯ್ತು ಎನ್ನಲಾಗಿದೆ.
ಕೇರಳದ ಕೋಳಿಕೋಡ್ ಜಿಲ್ಲೆಯ ಪದಿನಿ ಜರಿಯಾ ಗ್ರಾಮದ ನಿಧಿನ್ (19) ಮೃತ ದುರ್ದೈವಿ. ಎಎಂಸಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್ ಕೋರ್ಸಿಗೆ ಡಿ.1ರಂದು ಅಡ್ಮಿಶನ್ ಪಡೆದಿದ್ದ. ಈ ವೇಳೆ ಈತನ ತಂದೆ-ತಾಯಿ ಬಂದಿರಲಿಲ್ಲವಂತೆ. ಸಹೋದರನ ಜತೆ ಬಂದು ಕಾಲೇಜಿಗೆ ದಾಖಲಾಗಿದ್ದ. ದುಬೈನಲ್ಲಿ ವಾಸವಿರುವ ತಂದೆ-ತಾಯಿಗೆ ಪದೇಪದೆ ಫೋನ್ ಮಾಡುತ್ತಿದ್ದ ನಿಧಿನ್, ಬರುವಂತೆ ಮನವಿ ಮಾಡುತ್ತಿದ್ದನಂತೆ. ತನ್ನಿಂದ ಅಪ್ಪ-ಅಮ್ಮ ದೂರವಿದ್ದಾರೆ ಎಂದು ಮನನೊಂದ ನಿಧಿನ್, ಕಾಲ್ ಮಾಡಿ ಜಗಳವನ್ನೂ ಮಾಡಿದ್ದನಂತೆ. ಇದೇ ವಿಚಾರಕ್ಕೆ ಮನನೊಂದು ಕತ್ತು ಕೊಯ್ದುಕೊಂಡು ಸತ್ತಿರುವ ಶಂಕೆ ವ್ಯಕ್ತವಾಗಿದೆ.
ಕಾಲೇಜಿನ ಕ್ಯಾಂಪಸ್ ಒಳಗಿನ ಹಾಸ್ಟೆಲ್ನಲ್ಲಿ ಸಹಪಾಠಿಯೊಬ್ಬರ ಜತೆ ರೂಂನಲ್ಲಿ ವಾಸವಿದ್ದ ನಿಧಿನ್, ನಿನ್ನೆ(ಬುಧವಾರ) ಮಧ್ಯಾಹ್ನ ಹಾಸ್ಟೆಲ್ ಕೊಠಡಿಯ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದ. ಹಾಸ್ಟೆಲ್ನ ಸಹಪಾಠಿ ಬಂದು ಬಾಗಿಲು ಬಡಿದರೂ ನಿಧಿನ್, ತೆರೆದಿರಲಿಲ್ಲ. ಈ ಬಗ್ಗೆ ಸಹಪಾಠಿ ಹಾಸ್ಟೆಲ್ ವಾರ್ಡನ್ಗೆ ತಿಳಿಸಿದ್ದ. ವಾರ್ಡನ್ ಹಾಗೂ ಸಿಬ್ಬಂದಿ ಬಂದು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ಕತ್ತು ಕೊಯ್ದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಬನ್ನೇರುಘಟ್ಟ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.