ರಾಜ್ಯದಲ್ಲಿ ST ಮೀಸಲಾತಿ ಹೆಚ್ಚಿಸಲು ಬಿಜೆಪಿ ಒಲವು
ಬೆಂಗಳೂರು: ಎಸ್ಟಿ ಮೀಸಲಾತಿ ಹೆಚ್ಚಿಸಲು ರಾಜ್ಯ ಬಿಜೆಪಿ ನಿರ್ಧರಿಸಿದ್ದು, ಸಿಎಂ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಬಹಳ ವರ್ಷಗಳಿಂದ ಒತ್ತಾಯ ಇದೆ.ಈ ಹಿನ್ನೆಲೆ ಶುಕ್ರವಾರ ಬೆಳಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನ ಮಂಡಲದ ಉಭಯ ಸದನಗಳ ನಾಯಕರ ಸಭೆ ನಡೆಯುತ್ತಿದ್ದು, ಎಸ್ಟಿ ಮೀಸಲಾತಿ ಹೆಚ್ಚಿಸಲು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.
ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಎಸ್ಸಿಗೆ ಶೇ.15 ಮತ್ತು ಎಸ್ಟಿಗೆ ಶೇ.7.5 ಮೀಸಲಾತಿ ನೀಡಲಾಗಿದೆ. ಎರಡೂ ಸೇರಿಸಿದರೆ ಶೇ.22.5 ಆಗುತ್ತೆ. ಕರ್ನಾಟಕದಲ್ಲಿ ಎಸ್ಸಿಗೆ ಶೇ.15 ಹಾಗೂ ಎಸ್ಟಿಗೆ ಶೇ.3 ಮೀಸಲಾತಿ ಇದ್ದು, ಒಟ್ಟು ಶೇ.18 ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೀಸಲಾತಿ ನಡುವೆ ಶೇ.4.5 ವ್ಯತ್ಯಾಸವಿದೆ. ಇದು ಜನಸಂಖ್ಯೆಗೆ ಅನುಗುಣವಾಗಿಲ್ಲ ಎಂದು ಈ ವರ್ಗಕ್ಕೆ ಸೇರಿದ ಜನ ಮೀಸಲಾತಿ ಹೆಚ್ಚಿಸುವಂತೆ ಹೋರಾಟ ಮಾಡುತ್ತಿದ್ದಾರೆ.
2011ರ ಜನಗಣತಿ ಪ್ರಕಾರ ಎಸ್ಸಿ ಸಮುದಾಯ ಶೇ.17.15, ಎಸ್ಟಿಗೆ ಸೇರಿದವರು ಶೇ.6.95 ಇದ್ದಾರೆ. ಎರಡೂ ವರ್ಗ ಸೇರಿ ಶೇ.24.10 ಜನರಿದ್ದಾರೆ. ಆದರೆ ಮೀಸಲಾತಿ ಕೇವಲ ಶೇ.18 ಇದೆ. ಹೀಗಾಗಿ ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ ಬಂದಿತ್ತು. ಈ ಕಾರಣಕ್ಕೆ ಸಮ್ಮಿಶ್ರ ಸರ್ಕಾರ ಇದ್ದಾಗ 2019ರಲ್ಲಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು 2020ರ ಜುಲೈನಲ್ಲಿ ವರದಿ ನೀಡಿದೆ. ಎಸ್ಟಿ ಜನಾಂಗದವರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇ.3ರಿಂದ ಶೇ.7ರಷ್ಟು ಹೆಚ್ಚಿಸಬೇಕು. ಎಸ್ಸಿ ಜನಾಂಗದವರಿಗೆ ಶೇ.15- ಶೇ.17ರಷ್ಟು ಹೆಚ್ಚಾಗಬೇಕು. ಒಟ್ಟಾರೆ ಮೀಸಲಾತಿಯು ಶೇ.6ರಷ್ಟು ಹೆಚ್ಚಾಗಬೇಕು ಎಂದು ನಾಗಮೋಹನ್ ದಾಸ್ ಸಮಿತಿಯು ತಿಳಿಸಿದೆ. ಆದರೆ ಎರಡು ವರ್ಷ ಕಳೆದರೂ ಅಂಗೀಕಾರ ಆಗಿ ಜಾರಿಯಾಗಿಲ್ಲ.