ಭಾರತದ ಹಣದುಬ್ಬರ, ನೋವಿಗೆ ಹಿಂದುತ್ವವಾದಿಗಳೇ ಕಾರಣ; ಅಮೇಥಿಯಲ್ಲಿ ರಾಹುಲ್ ಗಾಂಧಿ ಆಕ್ರೋಶ

ಭಾರತದ ಹಣದುಬ್ಬರ, ನೋವಿಗೆ ಹಿಂದುತ್ವವಾದಿಗಳೇ ಕಾರಣ; ಅಮೇಥಿಯಲ್ಲಿ ರಾಹುಲ್ ಗಾಂಧಿ ಆಕ್ರೋಶ
2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ 50,000ಕ್ಕೂ ಹೆಚ್ಚು ಮತಗಳಿಂದ ಸೋಲುವವರೆಗೂ ಅಮೇಥಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.

ನವದೆಹಲಿ/ ಅಮೇಥಿ: ಚುನಾವಣಾ ಅಖಾಡ ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಅಮೇಥಿಯಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.

ಈ ವೇಳೆ ಹಿಂದುತ್ವದ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅವರು, ಭಾರತದಲ್ಲಿ ಹೆಚ್ಚುತ್ತಿರುವ ಹಣದುಬ್ಬರ, ನೋವು, ಹತಾಶೆಗೆಲ್ಲ ಹಿಂದುತ್ವವಾದಿಗಳೇ ನೇರ ಕಾರಣ ಎಂದು ಕಿಡಿ ಕಾರಿದ್ದಾರೆ. ಉತ್ತರ ಪ್ರದೇಶ ಕಾಂಗ್ರೆಸ್​ ಭದ್ರಕೋಟೆಯಾಗಿರುವ ಅಮೇಥಿಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಇಂದು ನಮ್ಮ ದೇಶದಲ್ಲಿ ನೋವು, ದುಃಖ ಹೆಚ್ಚಾಗಿದ್ದರೆ ಅದಕ್ಕೆ ಹಿಂದುತ್ವವಾದಿಗಳೇ ಕಾರಣ. ಇಂದು ಹಿಂದೂಗಳು ಮತ್ತು ಹಿಂದುತ್ವವಾದಿಗಳ ನಡುವೆ ಕದನವಾಗುತ್ತಿದೆ. ಹಿಂದೂಗಳು ಸತ್ಯಾಗ್ರಹವನ್ನು ನಂಬಿದರೆ, ಹಿಂದುತ್ವವಾದಿಗಳು ಕೇವಲ 'ಸತ್ತಾಗ್ರಹ' (ರಾಜಕೀಯ ದುರಾಸೆ)ಯನ್ನು ನಂಬುತ್ತಾರೆ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಂದು ಅಮೇಥಿಗೆ ಆಗಮಿಸಿದ್ದಾರೆ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸೋತ ನಂತರ ಎರಡೂವರೆ ವರ್ಷಗಳ ನಂತರ ರಾಹುಲ್ ಗಾಂಧಿ ಅಮೇಥಿಗೆ ಭೇಟಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯು ಸತತ ಎರಡನೇ ಅವಧಿಗೆ ಅಧಿಕಾರಕ್ಕೇರಲು ಶ್ರಮಿಸುತ್ತಿರುವಾಗ ರಾಜ್ಯದಲ್ಲಿ ಕಾಂಗ್ರೆಸ್ ಕೂಡ ತಳವೂರಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸೋದರಿ ಪ್ರಿಯಾಂಕಾ ಗಾಂಧಿ ಜೊತೆಗೆ ಅಮೇಥಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ, ಉತ್ತರ ಪ್ರದೇಶದ ಜನರಲ್ಲಿ ಈಗಿನ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶವಿದೆ. ಅವರ ಹೃದಯಗಳಲ್ಲಿ ಕಾಂಗ್ರೆಸ್​ಗೆ ಮೊದಲಿನಂತೆಯೇ ಜಾಗವಿದೆ. ಅನ್ಯಾಯದ ವಿರುದ್ಧ ನಾವು ಇನ್ನೂ ಒಂದಾಗಿದ್ದೇವೆ ಎಂದಿದ್ದಾರೆ.

2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ 50,000ಕ್ಕೂ ಹೆಚ್ಚು ಮತಗಳಿಂದ ಸೋಲುವವರೆಗೂ ಅಮೇಥಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು.