ಮೊಳಕಾಲ್ಮೂರು: ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಮಾಜಿ ಕಾಂಗ್ರೆಸ್‌ ಶಾಸಕ, ಇಲ್ಲಿದೆ ಮಾಹಿತಿ

ಮೊಳಕಾಲ್ಮೂರು: ಬಿಜೆಪಿ ಸೇರ್ಪಡೆಗೆ ನಿರ್ಧರಿಸಿದ ಮಾಜಿ ಕಾಂಗ್ರೆಸ್‌ ಶಾಸಕ, ಇಲ್ಲಿದೆ ಮಾಹಿತಿ

ಚಿತ್ರದುರ್ಗ, ಫೆಬ್ರವರಿ, 26: ರಾಜಕೀಯದಲ್ಲಿ ಯಾರು ಶತ್ರುಗಳಿಲ್ಲ, ಯಾರು ಮಿತ್ರರಿಲ್ಲ ಎಂಬುವಂತೆ ಇದೀಗ ಸಚಿವ ಬಿ. ಶ್ರೀರಾಮುಲು ಬದ್ದ ವೈರಿಯಾಗಿದ್ದ ಮಾಜಿ ಶಾಸಕರೊಬ್ಬರು ಕಾಂಗ್ರೆಸ್ ಬಿಟ್ಟು, ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ನೇರ್ಲಗುಂಟೆ ಎನ್.

ತಿಪ್ಪೇಸ್ವಾಮಿ ಅವರು ಇಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ, ಸಚಿವ ಬಿ. ಶ್ರೀರಾಮುಲು, ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ನೇತೃತ್ವದಲ್ಲಿ ಕೇಸರಿ ಬಾವುಟ ಹಿಡಿಯಲಿದ್ದಾರೆ.

ಶಿಕ್ಷಕ ವೃತ್ತಿ ಜೀವನದ ಆರಂಭಿಸಿದ್ದ ಎನ್. ತಿಪ್ಪೇಸ್ವಾಮಿ ಅವರು, 2013ರಲ್ಲಿ ಶ್ರೀರಾಮುಲು ಸ್ಥಾಪಿಸಿದ್ದ ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಗೆಲುವು ಸಾಧಿಸಿದ್ದರು. ನಂತರ 2018ರಲ್ಲಿ ಶ್ರೀರಾಮುಲು ಬಿಜೆಪಿ ಸೇರ್ಪಡೆಯಾದರು. ನಂತರ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲು ಶ್ರೀರಾಮುಲುಗೆ ಅವಕಾಶವೂ ಸಿಕ್ಕಿತು.

ರಾಮುಲುಗೆ ಬದ್ಧ ವೈರಿಯಾಗಿದ ತಿಪ್ಪೇಸ್ವಾಮಿ

ಈ ಹಿನ್ನೆಲೆಯಲ್ಲಿ ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿ ಹೋಯಿತು. ಅಂದಿನಿಂದ ಶ್ರೀರಾಮುಲು ವಿರುದ್ಧ ತೊಡೆ ತಟ್ಟುತ್ತಾ, ಬದ್ಧ ವೈರಿಯಾಗಿ ಕಾಣಿಸಿಕೊಂಡರು. ಸುದ್ದಿಗೋಷ್ಠಿಗಳಲ್ಲಿ ಶ್ರೀರಾಮುಲು ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದರು. ಆದರೆ ಇದೀಗ ಇಬ್ಬರು ಮತ್ತೆ ಒಂದಾಗಲಿದ್ದಾರೆ ಎನ್ನಲಾಗಿದೆ.

ಬಿಜೆಪಿಗೆ ಜಿಗಿಯಲು ತಿಪ್ಪೇಸ್ವಾಮಿ ನಿರ್ಧಾರ

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್. ತಿಪ್ಪೇಸ್ವಾಮಿ ಹಾಗಾಗ ಕಾಂಗ್ರೆಸ್ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಶ್ರೀರಾಮುಲು ಮೊಳಕಾಲ್ಮೂರು ಕ್ಷೇತ್ರ ಬಿಟ್ಟು ಬಳ್ಳಾರಿ ಜಿಲ್ಲೆಯ ಸೊಂಡೂರಿನಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತುಗಳು ಕೇಳಿಬಂದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಬೇಡಿಕೆ ಹೆಚ್ಚಾಯಿತು. ಮತ್ತೊಂದು ಕಡೆ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.

ಇನ್ನೊಂಡೆದೆ ಕಡೆ ಯುವ ಮುಖಂಡ ಯೋಗೇಶ್ ಬಾಬು ಕೂಡ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಯಾವಾಗ ಕಾಂಗ್ರೆಸ್ ಟಿಕೆಟ್‌ಗೆ ಪೈಪೋಟಿ ಹಾಚ್ಚಯಿತೋ, ಆಗ ಬಿಜೆಪಿ ಪಕ್ಷಕ್ಕೆ ಜಿಗಿಯಲು ತಿಪ್ಪೇಸ್ವಾಮಿ ನಿರ್ಧಾರ ಮಾಡಿದರು ಎನ್ನಲಾಗಿದೆ. ಈ ಮೂಲಕ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಬಹುದಾಗಿದೆ.

ರಾಮುಲು ವಿರುದ್ಧ ಸೋಲುಂಡಿದ್ದ ತಿಪ್ಪೇಸ್ವಾಮಿ

2013ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ನೇರ್ಲಗುಂಟೆ ತಿಪ್ಪೇಸ್ವಾಮಿ, ಮತ್ತೆ 2018ರಲ್ಲಿ ಮರು ಆಯ್ಕೆ ಬಯಸಿದ್ದರು. ಆದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸುಮಾರು 40ಕ್ಕೂ ಹೆಚ್ಚು ಮತಗಳನ್ನು ಪಡೆದು ಶ್ರೀರಾಮುಲು ವಿರುದ್ಧ ಸೋಲು ಕಂಡಿದ್ದರು. ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಳೆದ ಐದು ವರ್ಷಗಳಿಂದ ಸಚಿವ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಅವರು ಟೀಕಾ ಪ್ರಹಾರ ನಡೆಸುತ್ತಾ ಬಂದಿದ್ದರು. ನಂತರ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಸಿಗುವುದು ಇಲ್ಲ ಎಂಬುದು ಖಚಿತವಾದ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎಂಬ ಗಾದೆ ಮಾತಿನಂತೆ ಬಿಜೆಪಿ ಸೇರಲು ತಿಪ್ಪೇಸ್ವಾಮಿ ತುದಿಗಾಲಲ್ಲಿ ನಿಂತಿದ್ದಾರೆ.

ಮೊಳಕಾಲ್ಮೂರು ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಬೃಹತ್ ಕಾರ್ಯಕ್ರಮ ಏರ್ಪಡಿಸಿ ತಿಪ್ಪೇಸ್ವಾಮಿ ಬಿಜೆಪಿ ಪಕ್ಷ ಸೇರಲಿದ್ದಾರೆ ಎನ್ನಲಾಗಿದೆ. ಇನ್ನು ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ರಾಜ್ಯ ಸಚಿವ ಬಿ.ಶ್ರೀರಾಮುಲು, ಜಿಲ್ಲೆಯ ಹಿರಿಯ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ ಸೇರಿದಂತೆ ಮತ್ತಿತರರು ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿವೆ.