4ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ: ಮೈಸೂರಲ್ಲಿ ರಾಹುಲ್ ಯಾತ್ರೆಗೆ ಪೊಲೀಸ್ ಸರ್ಪಗಾವಲು

ಮೈಸೂರು: ಕರ್ನಾಟಕದಲ್ಲಿ ಭಾರತ್ ಜೋಡೋ ಯಾತ್ರೆ ಇಂದು(ಸೋಮವಾರ) 4ನೇ ದಿನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರಿನ ಆರ್.ಗೇಟ್ ವೃತ್ತದಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಳಗ್ಗೆ 6.30ಕ್ಕೆ ಪಾದಯಾತ್ರೆ ಆರಂಭಿಸಿದ್ದಾರೆ.
ದಾರಿ ಮಧ್ಯೆ ಮಸೀದಿ ಮತ್ತು ಚರ್ಚ್ಗೂ ರಾಹುಲ್ ಭೇಟಿ ನೀಡಿದರು. ಮಂಡಿ ಮೊಹಲ್ಲಾದಲ್ಲಿರುವ ಮಸ್ಜಿದೇ ಅಜಃಮ್ ಮಸಿದೀಗೆ ತೆರಳಿದ ರಾಗಾ, ಕೆಲ ನಿಮಿಷ ಪ್ರಾರ್ಥನೆ ಸಲ್ಲಿಸಿದರು. ಅಶೋಕ ರಸ್ತೆಯಲ್ಲಿರುವ ಸೇಂಟ್ ಫಿಲೋಮಿನಾ ಚರ್ಚ್ಗೂ ಭೇಟಿ ನೀಡಿದ ರಾಹುಲ್, ಕೆಲ ಕ್ಷಣ ಚರ್ಚಿಸಿದರು. ಮತ್ತೆ ಪಾದಯಾತ್ರೆ ಹೊರಟರು.
ಎಐಸಿಸಿ ಪ್ರಧಾನ ಕಾರ್ಯದಶಿರ್ ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಂದೀಪ್ಸಿಂಗ್ ಸುರ್ಜೇವಾಲಾ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಆರ್.ದೃವನಾರಾಯಣ್, ಯು.ಟಿ.ಖಾದರ್, ತನ್ವೀರ್ ಸೇಠ್, ವಾಸು ಸೇರಿದಂತೆ ಹಲವರು ಸಾಥ್ ನೀಡಿದ್ದಾರೆ.
ಪಾದಯಾತ್ರೆಯು ಅರಮನೆ ಮೂಲಕ ಅಶೋಕ ರಸ್ತೆ ತಲುಪಿ ಬನ್ನಿಮಂಟಪ ಮೂಲಕ ಶ್ರೀರಂಗಪಟ್ಟಣ ತಲುಪಲಿದೆ. ಬೆಳಗ್ಗೆ 14 ಕಿ.ಮೀ. ಪಾದಯಾತ್ರೆ ನಡೆಯಲಿದ್ದು, ನಂತರ ಪಾದಯಾತ್ರಿಗಳು ವಿಶ್ರಾಂತಿ ಪಡೆಯುವರು. ಸಂಜೆ 4ಕ್ಕೆ ಮತ್ತೆ ಪಾದಯಾತ್ರೆ ಆರಂಭವಾಗಿ ಶ್ರೀರಂಗಪಟ್ಟಣ ಮೂಲಕ ಪಾಂಡವಪುರ ತಲುಪಲಿದೆ. ಇಂದು ಒಟ್ಟು 25 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ.
ಮೈಸೂರಲ್ಲಿ ಖಾಕಿ ಸರ್ಪಗಾವಲು: ಮೈಸೂರಿನಲ್ಲಿ ರಾಹುಲ್ಗೆ ಪೊಲೀಸ್ ಸರ್ಪಗಾವಲಿದೆ. ರಾಹುಲ್ ಸುತ್ತ ಮುತ್ತ ಕಾರ್ಯಕರ್ತರಿಗಿಂತ ಬಹುತೇಕ ಪೊಲೀಸರೇ ಇದ್ದು, ಬಿಗಿ ಭದ್ರತೆ ನೀಡಲಾಗಿದೆ. ಮೈಸೂರಿನಲ್ಲಿ ರಾಹುಲ್ಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಾರೆ ಎಂಬ ಮಾಹಿತಿ ಬಂದ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.
ಮೈಸೂರಿನಲ್ಲಿ ಯಾತ್ರೆ ಸಾಗುವ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶಿಸಿದರೆ, ಅದಕ್ಕ ತಕ್ಕ ಉತ್ತರ ನೀಡುವುದು ನಿಶ್ಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸುತ್ತಾರೆ ಎಂಬ ಮಾಹಿತಿ ಬಂದಿದೆ. ಪೊಲೀಸರು ಮುನ್ನೆಚ್ಚರಿಕೆ ವಹಿಸಬೇಕು. ಇಷ್ಟರ ಮೇಲೆಯೂ ಬಿಜೆಪಿಯವರು ಕಪ್ಪುಪಟ್ಟಿ, ಕಪ್ಪುಬಾವುಟ ತೋರಿಸಲಿ, ಮೊಟ್ಟೆಯಾದರೂ ಹೊಡೆಯಲಿ. ಅದಕ್ಕೆ ಹೆದರಲ್ಲ. ಆದರೆ, ಹೀಗೆ ಮಾಡಿದರೆ ತಕ್ಕ ಫಲವನ್ನು ಬಿಜೆಪಿಯವರು ಉಣ್ಣಲಿದ್ದಾರೆ ಎಂದು ಎಚ್ಚರಿಸಿದ್ದಾರೆ.