ವಾಯು ಮಾಲಿನ್ಯ: ನೋಯ್ಡಾದ ಎಲ್ಲಾ ಶಾಲೆಗಳಿಗೆ ನ.8 ರವರೆಗೆ ಆನ್‌ಲೈನ್ ಕ್ಲಾಸ್

ವಾಯು ಮಾಲಿನ್ಯ: ನೋಯ್ಡಾದ ಎಲ್ಲಾ ಶಾಲೆಗಳಿಗೆ ನ.8 ರವರೆಗೆ ಆನ್‌ಲೈನ್ ಕ್ಲಾಸ್

ವದೆಹಲಿ,; ನವೆಂಬರ್ 4: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಕಡಿಮೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಶಾಲೆಗಳಿಗೆ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ. 8ನೇ ತರಗತಿಯವರೆಗಿನ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ನವೆಂಬರ್ 8 ರವರೆಗೆ ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸಲು ಗುರುವಾರ ತಿಳಿಸಲಾಗಿದೆ.

ಜೊತೆಗೆ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುವಂತೆ ಶಾಲೆಗಳಿಗೆ ತಿಳಿಸಲಾಗಿದೆ ಎಂದು ಗೌತಮ್ ಬುದ್ಧ ನಗರದ ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ (ಡಿಐಒಎಸ್) ಧರ್ಮವೀರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲದೆ ವಿದ್ಯಾರ್ಥಿಗಳಿಗೆ ಕ್ರೀಡೆ ಅಥವಾ ಸಭೆಗಳಂತಹ ಹೊರಾಂಗಣ ಚಟುವಟಿಕೆಗಳನ್ನು ಎಲ್ಲಾ ಶಾಲೆಗಳಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

"ಎಲ್ಲಾ ಶಾಲೆಗಳಲ್ಲಿ 8ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಬೋಧನೆಗಾಗಿ ಆನ್‌ಲೈನ್ ಕ್ಲಾಸ್ ತೆಗೆದುಕೊಳ್ಳಲು ಸೂಚಿಸಲಾಗಿದೆ. 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಸಾಧ್ಯವಾದಷ್ಟು ಆನ್‌ಲೈನ್ ಮೋಡ್‌ಗೆ ಬದಲಾಯಿಸಲು ಸೂಚಿಸಲಾಗಿದೆ" ಎಂದು ಸಿಂಗ್ ಹೇಳಿದರು. ಜೊತೆಗೆ ಶಾಲೆಗಳಲ್ಲಿ ಕ್ರೀಡೆಗಳಂತಹ ಯಾವುದೇ ಹೊರಾಂಗಣ ಚಟುವಟಿಕೆಗಳನ್ನು ನವೆಂಬರ್ 8 ರವರೆಗೆ ಅನುಮತಿಸಲಾಗುವುದಿಲ್ಲ ಎಂದು ಡಿಐಒಎಸ್ ಪಿಟಿಐಗೆ ತಿಳಿಸಿದ್ದಾರೆ.

ಗೌತಮ್ ಬುದ್ಧ ನಗರ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಉನ್ನತ ಶಿಕ್ಷಣ ಕೇಂದ್ರಗಳನ್ನು ಒಳಗೊಂಡಂತೆ ಸುಮಾರು 1,800 ಶಾಲೆಗಳಿವೆ. ಗುರುವಾರ ವಾಯು ಗುಣಮಟ್ಟ ಸೂಚ್ಯಂಕ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ತೀವ್ರ ಮಟ್ಟವನ್ನು ತಲುಪಿದೆ. ಪಶ್ಚಿಮ ಉತ್ತರ ಪ್ರದೇಶದ ದೆಹಲಿಗೆ ಹೊಂದಿಕೊಂಡಿರುವ ಜಿಲ್ಲೆಯ ಭಾಗಗಳಲ್ಲಿ ದಟ್ಟವಾದ ಹೊಗೆ ಆವರಿಸಿದೆ.