ಲಂಚ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಮಂಜುನಾಥ್ ಮರುನೇಮಕ
ಬೆಂಗಳೂರು: ಲಂಚ ಪಡೆದ ಆರೋಪದಡಿ ಬಂಧನಕ್ಕೊಳಗಾಗಿದ್ದ ಐಎಎಸ್ ಅಧಿಕಾರಿ ಜೆ ಮಂಜುನಾಥ್ ಅವರನ್ನು ಮತ್ತೆ ಸರ್ಕಾರ ಸೇವೆಗೆ ಮರುನೇಮಿಸಿದೆ.
ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ಮಂಜುನಾಥ್ರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪದನಿಮಿತ್ತ ಜಂಟಿ ಕಾರ್ಯದರ್ಶಿ ಹಾಗೂ ವಿಶೇಷ ಅಧಿಕಾರಿಯಾಗಿ ಮರುನೇಮಿಸಲಾಗಿದೆ.ಭೂ ವ್ಯಾಜ್ಯ ಇತ್ಯರ್ಥ ಸಂಬಂಧ ಲಂಚ ಪಡೆದ ಆರೋಪದಡಿ ಅಂದು ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಇವರನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಬಂಧಿಸಿದ್ದರು. ರಾಜ್ಯ ಸರ್ಕಾರ ಸೇವೆಯಿಂದ ಅಮಾನತುಗೊಳಿಸಿತ್ತು. ಇದೀಗ ಮತ್ತೆ ಸೇವೆಗೆ ಮರು ನೇಮಕ ಮಾಡಿರುವುದು ಹುಬ್ಬೇರಿಸುವಂತೆ ಮಾಡಿದೆ.