ಪರವಾನಗಿ ನವೀಕರಿಸದೆ ರಿವಾಲ್ವರ್ ಹೊಂದಿದ್ದ ಪ್ರಕರಣ: ಶಾಸಕ ಸೋಮಶೇಖರ ರೆಡ್ಡಿ ದೋಷಿ

ಬೆಂಗಳೂರು: 'ಪರವಾನಗಿ ನವೀಕರಿಸದೆ ರಿವಾಲ್ವರ್ ಹೊಂದಿದ್ದಾರೆ' ಎಂಬ ಆರೋಪದಡಿ ಬಳ್ಳಾರಿಯ ಬಿಜೆಪಿ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರನ್ನು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಅನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್, ಷರತ್ತುಗಳ ಆಧಾರದಲ್ಲಿ ರೆಡ್ಡಿ ಅವರನ್ನು ಬಿಡುಗಡೆ ಮಾಡಿ ಆದೇಶಿಸಿದ್ದಾರೆ.
'ಆರೋಪಿಯು ತಾವು ಎಸಗಿರುವ ಅಪರಾಧಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಅಪರಾಧಕ್ಕೆ 1 ರಿಂದ 3 ವರ್ಷಗಳವರೆಗೆ ಶಿಕ್ಷೆ ಮತ್ತು ದಂಡ ವಿಧಿಸಬಹುದಾಗಿದೆ. ಆದರೆ, ಇದು ಜೀವಾವಧಿ ಅಥವಾ ಮರಣ ದಂಡನೆ ವಿಧಿಸಬಹುದಾದ ಪ್ರಕರಣವಲ್ಲ. ಹೀಗಾಗಿ, ದೋಷಿಯನ್ನು ಬಿಡುಗಡೆ ಮಾಡುವುದರಿಂದ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮ ಆಗುವುದಿಲ್ಲ' ಎಂದು ಆದೇಶದಲ್ಲಿ ವಿವರಿಸಲಾಗಿದೆ.