ನಿಮ್ಮಿಂದಲೇ‌ ಸರ್ಕಾರ ಅಲ್ಲ, ಕನಿಷ್ಠ ಪೋನ್ ಕಾಲ್ ರಿಸೀವ್ ಮಾಡಿ: ಬಿಜೆಪಿ ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರ ಆಕ್ರೋಶ

ನಿಮ್ಮಿಂದಲೇ‌ ಸರ್ಕಾರ ಅಲ್ಲ, ಕನಿಷ್ಠ ಪೋನ್ ಕಾಲ್ ರಿಸೀವ್ ಮಾಡಿ: ಬಿಜೆಪಿ ಸಚಿವರ ವಿರುದ್ಧ ಸ್ವಪಕ್ಷೀಯ ಶಾಸಕರ ಆಕ್ರೋಶ

ಬೆಳಗಾವಿ: ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗದಿರುವ ಬಗ್ಗೆ ಶಾಸಕರು ಸಿಎಂ ಬಸವರಾಜ ಬೊಮ್ಮಾಯಿ ಮುಂದೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬುಧವಾರ ತಡರಾತ್ರಿಯ ವರೆಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುಮಾರು ಹತ್ತಕ್ಕೂ ಅಧಿಕ ಶಾಸಕರು ಸಿಎಂ ಬಳಿ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಬೆಳಗಾವಿಯ ಕಾಕತಿಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ಶಾಸಕಾಂಗ ಸಭೆಯಲ್ಲಿ ಸಚಿವರ ನಡವಳಿಕೆಯ ಬಗ್ಗೆ 10 ಕ್ಕೂ ಹೆಚ್ಚು ಶಾಸಕರು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ನಿಮ್ಮಿಂದಲೇ‌ ಸರ್ಕಾರ ಅಲ್ಲ, ವರ್ತನೆ ಸರಿಪಡಿಸಿಕೊಳ್ಳಿ, ಕನಿಷ್ಟ ಪೋನ್ ಕಾಲ್ ರಿಸೀವ್ ಮಾಡಿ ಎಂದು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಕ್ಷೇತ್ರಗಳಿಗೆ ಅನುದಾನ ನೀಡುವಂತೆ ಸಿಎಂಗೆ ಶಾಸಕರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಹಿರಿಯ ಅಧಿಕಾರಿಗಳನ್ನು ಬದಲಾವಣೆ ಮಾಡಿ ಎಂದು ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ‌ಯತ್ನಾಳ್ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯಲ್ಲಿ ಶಾಸಕರು ಸದನಕ್ಕೆ ಹಾಜರಾಗುವಂತೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಎಲ್ಲರೂ ಒಗ್ಗಟ್ಟಾಗಿರಿ, ವಿಪಕ್ಷದವರನ್ನು ಎದುರಿಸಬೇಕು ಎಂದು ಶಾಸಕರಿಗೆ ಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮತಾಂತರ ಕಾಯ್ದೆ ಕರಡು ಸಿದ್ಧವಾಗಿದೆ, ಇನ್ನಷ್ಟು ಅಂತಿಮಗೊಳಿಸುವುದು ಬಾಕಿ ಇದೆ ಎಂದು ಸಿಎಂ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾಗಿದ್ದು, ಮತಾಂತರ ನಿಷೇಧ ಕಾಯ್ದೆ ಸಾಧಕ-ಬಾಧಕ ಚರ್ಚಿಸಿ ನಂತರ ಜಾರಿಗೊಳಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ವಿಧಾನ ಪರಿಷತ್ ಚುನಾವಣೆ ಮತ್ತು ಬೆಳಗಾವಿ ಸೋಲಿನ ಬಗ್ಗೆ ಸಭೆಯಲ್ಲಿ ಯಾವುದೇ ಗಂಭೀರ ಚರ್ಚೆ ಮಾಡಿಲ್ಲ ಎನ್ನಲಾಗಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಶಾಸಕ ಬಾಲಚಂದ್ರ ಜಾರಕಿಹೊಳಿ ಸಭೆಯಲ್ಲಿ ಮೌನವಾಗಿ ಕುಳಿತಿದ್ದರು ಎಂದು ತಿಳಿದು ಬಂದಿದೆ. ಬೆಳಗಾವಿ ಪರಿಷತ್ ಚುನಾವಣೆಯಲ್ಲಿ ನಾವು ಏಕ ‌ಅಭ್ಯರ್ಥಿ ಕಣಕ್ಕಿಳಿಸಿದ್ದೆವು ಅಲ್ಲಿ ನಾವು ಗೆಲ್ಲಬೇಕಾಗಿತ್ತು. ಈ ಸೋಲಿನ ಬಗ್ಗೆ ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು‌ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ ಎನ್ನಲಾಗಿದೆ.

ಪದೇ ಪದೇ ಸಿಎಂ ಬದಲಾವಣೆಯಾಗುತ್ತಾರೆ ಎಂಬ ಮಾತುಗಳು ಯಾಕೆ ಕೇಳಿ ಬರುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಭೆಯಲ್ಲಿ ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ.

ನಾಯಕತ್ವ ಬದಲಾವಣೆ ಮಾತು ಕೇಳಿ ಬಂದರೆ ಸರ್ಕಾರಕ್ಕೆ ಸ್ಥಿರತೆ ಇರುವುದಿಲ್ಲ. ಅಧಿಕಾರಿಗಳು ಕೂಡಾ ಆಗ ಮಾತು ಕೇಳುವುದಿಲ್ಲ. ಮೊದಲು ಅದಕ್ಕೆ ಇತಿಶ್ರೀ ಹಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ